ರೈತರಿಂದ ವಿಶೇಷ ಬಸವ ಜಯಂತಿ ಆಚರಣೆ
ಕನ್ನಡಪ್ರಭ ವಾರ್ತೆ, ಗದಗ, ಮೇ 12
ಮಹಾ ಮಾನವತಾವಾದಿ ಬಸವಣ್ಣನವರ ಜಯಂತಿಯನ್ನು ಸೋಮವಾರ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಆದರೆ ರೈತರು ತಮ್ಮ ಜೀವನಾಡಿಯಾಗಿರುವ ಎತ್ತುಗಳನ್ನು ದೇವರೆಂದೇ ಭಾವಿಸಿ ಭಕ್ತಿ, ಭಾವದಿಂದ ಪೂಜಿಸುವ ಮೂಲಕ ವಿಶೇಷವಾಗಿ ಆಚರಿಸುತ್ತಾರೆ.
ರೈತರಿಗೆ ಕೃಷಿ ಕಾರ್ಯದಲ್ಲಿ ನೆರವಾಗುವ ಎತ್ತುಗಳಿಗೆ ವಿಶೇಷ ರೀತಿಯಲ್ಲಿ ಅಲಂಕರಿಸುತ್ತಾರೆ. ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಇಂದಿಗೂ ನಮ್ಮ ಸಂಸ್ಕೃತಿಯಲ್ಲಿ ಎತ್ತುಗಳನ್ನು ಪೂಜ್ಯನೀಯ ಭಾವನೆಯಿಂದ ಕಾಣಲಾಗುತ್ತಿದೆ. ವರ್ಷವಿಡಿ ರೈತರಿಗೆ ನೆರವಾಗುವ ಎತ್ತುಗಳಿಗೆ ಈ ಬಸವ ಜಯಂತಿಯಂದು ಪೂಜಿಸುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಾಗಿದೆ.
ಎತ್ತುಗಳ ಮೆರವಣಿಗೆ: ಜಿಲ್ಲೆಯ ರೈತರು ಈ ಬಸವ ಜಯಂತಿಯನ್ನು ಸಡಗರದಿಂದ ಆಚರಿಸುತ್ತಾರೆ. ಈ ಹಬ್ಬವು ಗ್ರಾಮೀಣ ಪ್ರದೇಶದ ರೈತರ ಪಾಲಿಗೆ ಹೊಸ ಸಂತಸವನ್ನುಂಟು ಮಾಡುತ್ತದೆ. ಬಸವ ಜಯಂತಿಯಂದು ರೈತರು ಎತ್ತು ಹಾಗೂ ದನಕರುಗಳಿಗೆ ಸ್ನಾನ ಮಾಡಿಸಿ ಎತ್ತುಗಳ ಕೊಂಬುಗಳಿಗೆ ವಿವಿಧ ರೀತಿಯ ಬಣ್ಣ ಹಚ್ಚುತ್ತಾರೆ. ಕೊಂಬೆಣಸು, ಜೂಲಗಳನ್ನು ಹಾಕಿ ಅವುಗಳನ್ನು ಶೃಂಗರಿಸಿ ಸಂಜೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಮೆರವಣಿಗೆಯಲ್ಲಿ ಕಾಣುವ ಆಕರ್ಷಕ ಹಾಗೂ ವಿಶೇಷವಾಗಿ ಅಲಂಕೃತಗೊಳಿಸಿದ ಎತ್ತುಗಳಿಗೆ ವಿಶೇಷ ಬಹುಮಾನ ಕೊಡಲಾಗುತ್ತದೆ. ಬಸವ ಜಯಂತಿಯ ಅಂಗವಾಗಿ ಮನೆಗಳಲ್ಲಿ ವಿವಿಧ ಸಿಹಿ ಭೋಜನಗಳನ್ನು ಮಾಡಲಾಗುತ್ತದೆ. ಹೋಳಿಗೆ, ಪಾಯಸ ಮತ್ತಿತರ ಭೋಜನವನ್ನು ತಮ್ಮ ಜಾನುವಾರುಗಳಿಗೆ ತಿನ್ನಿಸಿ, ತಾವು ಸೇವಿಸಿ ಸಂಭ್ರಮಿಸುತ್ತಾರೆ. ಸಂಜೆಯ ವೇಳೆಗೆ ಮಂಗಳ ವಾದ್ಯಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾರೆ.
ಉತ್ತಮ ಮಳೆ ನಿರೀಕ್ಷೆಯಲ್ಲಿ ರೈತ: 2 ವರ್ಷಗಳಿಂದ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೇ ಇರುವುದು ರೈತರ ಹುಮ್ಮಸ್ಸು ಕಡಿಮೆಯಾಗಲು ಕಾರಣವಾಗಿದೆ. ಕಳೆದ ಬಾರಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು, ಇದರಿಂದಾಗಿ ರೈತರು ತಮ್ಮ ಜಾನುವಾರುಗಳಿಗೆ ಬೇಕಾಗುವ ಮೇವು, ಹೊಟ್ಟುಗಳನ್ನು ಸಂಗ್ರಹಿಸಿಕೊಳ್ಳುವ ಮೂಲಕ ಇಲ್ಲಿಯವರೆಗೂ ಜಾನುವಾರುಗಳನ್ನು ಸಾಕುತ್ತಾ ಬಂದಿದ್ದಾರೆ. ಈ ಬಾರಿ ರೈತರು ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕೆಲವು ರೈತರು ಕಳೆದ ಬಾರಿಯಂತೆಯೇ ಈ ಬಾರಿಯೂ ಬರಗಾಲದ ಛಾಯೆ ಆವರಿಸಲಿದೆ ಎಂದು ಈ ಹಬ್ಬದ ಆಚರಣೆಯಲ್ಲಿ ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ.
ನಮ್ಮ ದೇಶಕ್ಕ ಕೃಷಿಯೇ ಆಧಾರ. ರೈತರೇ ಜೀವ, ರೈತರ ಜೀವನಾಡಿಯೇ ಈ ಎತ್ತುಗಳು. ಹಾಗಾಗಿ ಈ ಎತ್ತಗಳನ್ನೇ ವರ್ಷ ಪೂರ್ತಿ ಹೊಲ್ದಾಗ ದುಡಸ್ತೀವಿ. ಅದರಿಂದ ಲಾಭಾನೂ ಪಡ್ಕೊತೀವಿ. ಹಂಗಾಗಿ ವರ್ಷಪೂರ್ತಿ ಕೆಲಸಾ ಮಾಡೋ ಈ ಎತ್ತಿಗೆ ಈ ಬಸು ಜಯಂತಿ ದಿನ ಪೂಜೆ ಮಾಡಿ, ನಮನ ಸಲ್ಲಿಸ್ತೀವಿ. ಇದು ನಮ್ಮ ಹಿಂದಿನ ಕಾಲದಿಂದಾಲೂ ನಡ್ಕೊಂಡ ಬಂದ ಪದ್ಧತಿಯಾಗೈತ್ರಿ.
ದೊಡ್ಡಬಸಪ್ಪ ಸೊರಟೂರ, ಹನುಮಂತಗೌಡ ದೊಡ್ಡಗೌಡ್ರ, ಶಿರಹಟ್ಟಿ ತಾಲೂಕಿನ ಗೊಜನೂರು ಗ್ರಾಮದ ರೈತರು
ನಮ್ಮ ಅಜ್ಜರ ಕಾಲದಿಂದಾನೂ ಈ ದನದ (ಎತ್ತುಗಳು) ಮೆರವಣಿಗೆ ಮಾಡ್ಕೊಂತ ಬಂದೀವ್ರಿ. ನಮ್ಮ ಕಡೆ ಈ ದನದ ಮೆರವಣಿಗೆ ವಿಶೇಷವಾಗಿ ಆಚರಸ್ತೀವಿ. 2-3 ವರ್ಷದಿಂದ ಇಲ್ಲಿ ಬರಗಾಲ ಬಿದೈತ್ರಿ. ಆದ್ರ ಈ ಬಾರಿ ಮಳೆ ಚಲೋ ಆಕೈತಿ ಅನ್ನೋ ಆಸೆ ಐತ್ರಿ. ಹಿಂಗಾಗಿ ನಾವೆಲ್ರೂ ಈ ಬಸವ ಜಯಂತಿ ದಿನ ನಮ್ಮ ಎತ್ತಗೆ ಪೂಜೆ ಮಾಡಿ. ಊರಿನ ತುಂಬ ಮೆರವಣಿಗಿ ಮಾಡ್ತೀವ್ರಿ.....
ಅಮರೇಶಗೌಡ ಗರಡ್ಡಿ, ರಾಘವೇಂದ್ರ ಆರೇರ್, ರೋಣ ತಾಲೂಕಿನ ಅರಹುಣಶಿ ಗ್ರಾಮದ ರೈತರು
-ಅಜೀಜಅಹ್ಮದ ಬಳಗಾನೂರ