ವೀರಶೈವರು ಹಿಂದೂಗಳಲ್ಲ ಎಂದ ತಿಪ್ಪಣ್ಣ ವಿರುದ್ಧ ಆಕ್ರೋಶ
ಕನ್ನಡಪ್ರಭ ವಾರ್ತೆ, ಗದಗ, ಮೇ 12
ಜ. ತೋಂಟದಾರ್ಯ ಮಠದಲ್ಲಿ ಈಚೆಗೆ ಜರುಗಿದ ಸಮಾರಂಭದಲ್ಲಿ ವಿಧಾನ ಪರಿಷತ್ನ ಮಾಜಿ ಸದಸ್ಯ ಎನ್. ತಿಪ್ಪಣ್ಣ ವೀರಶೈವರು ಹಿಂದೂಗಳಲ್ಲ ಎಂದು ಹೇಳುವ ಮೂಲಕ ಸಮಾಜದಲ್ಲಿ ದ್ವೇಷ ಭಾವನೆ ಬಿತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ವೀರಶೈವ ಯುವ ವೇದಿಕೆ ಗದಗ ಹಾಗೂ ಹಿಂದೂ ಪರ ಸಂಘಟನೆಗಳ ಮಹಾಮಂಡಳದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಹಿಂದೂ ವೀರಶೈವ ಯುವ ವೇದಿಕೆಯ ಜಿಲ್ಲಾಧ್ಯಕ್ಷ ವಿಶ್ವನಾಥ ಅಂಗಡಿ ಮಾತನಾಡಿ, ಭಾರತೀಯರೆಲ್ಲರೂ ಮೂಲತಃ ಹಿಂದೂಗಳೆ. ನಾವೆಲ್ಲ ಹಿಂದೂಗಳಾದ ನಂತರವೇ ವೀರಶೈವರು, ಲಿಂಗಾಯತರು, ಬ್ರಾಹ್ಮಣರು, ಅಕ್ಕಸಾಲಿಗರು ವಿವಿಧ ಜಾತಿ ಸೂಚಕ ಪದಗಳನ್ನು ಬಳಸುವ ಪರಂಪರೆ ಶತಶತಮಾನಗಳಿಂದಲೂ ಬಂದಿದೆ. ಸಮಾಜದಲ್ಲಿ ಹಿಂದೂ ಧರ್ಮದ ವಿವಿಧ, ಜಾತಿ, ಪಂಗಡಗಳ ಜನರು ಅನೋನ್ಯವಾಗಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಪ್ರಸ್ತುತ ಕೆಲವು ಹಿಂದೂ ಸಮಾಜ ವಿರೋಧಿ ಶಕ್ತಿಗಳು ನಮ್ಮ ನಮ್ಮಲ್ಲಿಯೇ ಭೇದ ಭಾವವನ್ನು ಬೆಳೆಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಸರಿಯಲ್ಲ ಎಂದರು.
ಧರ್ಮ, ಸಂಸ್ಕೃತಿ, ಹಿಂದುತ್ವದ ಪ್ರಬಲ ಪ್ರತಿಪಾದಕ ಪಕ್ಷ ಬಿಜೆಪಿಯಿಂದಲೇ ವಿಧಾನಪರಿಷತ್ ಸದಸ್ಯತ್ವ ಪಡೆದ ಎನ್. ತಿಪ್ಪಣ್ಣ ಹೇಳಿಕೆ ಸರಿಯಲ್ಲ. ಇನ್ನಾದರೂ ಅವರು ಸಮಾಜದ ದಾರಿ ತಪ್ಪಿಸುವ ಯತ್ನ ಕೈಬಿಡಬೇಕು. ಇಲ್ಲದಿದ್ದರೆ ಮುಂದೆ ಸಂಘಟನೆ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಮನವಿ ನೀಡುವ ವೇಳೆ ಸಂಘಟನೆ ಕಾರ್ಯದರ್ಶಿ ಅನಿಲ ಹೊಸಮಠ, ಬಸವರಾಜ ಬಳ್ಳಾರಿ, ಗವಿಸಿದ್ದಯ್ಯ ಹಿರೇಮಠ, ಸಂಗಮೇಶ ಕರಮುಡಿ, ಮಲ್ಲಿಕಾರ್ಜುನ ಹರ್ತಿ, ರಾಜು ಗಾಣಿಗೇರ, ಮಂಜುನಾಥ ಉಳಾಗಡ್ಡಿ ಇದ್ದರು.