ಶಿವಾಜಿ ಆದರ್ಶ ಅಜರಾಮರ: ರಾಜು
ಕನ್ನಡಪ್ರಭ ವಾರ್ತೆ, ಗದಗ, ಮೇ 12
ಸ್ವಾಭಿಮಾನಿ, ತಾಯ್ನಾಡಿನ ಅಪ್ರತಿಮ ದೇಶ ಭಕ್ತರಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರು ನಾಡಿಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರ ಆದರ್ಶಗಳು ಯುವ ಪೀಳಿಗೆಗೆ ಮಾದರಿ ಎಂದು ಶ್ರೀರಾಮ ಸೇನೆಯ ಜಿಲ್ಲಾ ಸಂಚಾಲಕ ರಾಜು ಖಾನಪ್ಪನವರ ಹೇಳಿದರು.
ಭಾನುವಾರ ಗದಗ ನಗರದ ಮುಖ್ಯ ವೃತ್ತವಾದ ಟಾಂಗಾ ಕೂಟದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 386ನೇ ಜಯಂತಿ ಹಾಗೂ ಬಸವ ಜಯಂತಿ ಉತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಯಿ ಜೀಜಾ ಮಾತೆ ಹೇಳಿದ ದೇಶಾಭಿಮಾನದ ಕಥೆಗಳಿಂದ ಪ್ರಭಾವಿತ ಶಿವಾಜಿ ಮಹಾರಾಜರು ಶೌರ್ಯ ಮತ್ತು ಹೋರಾಟದ ಮನೋಭಾವನೆ ರೂಢಿಸಿಕೊಂಡಿದ್ದರು. ಪ್ರಾಣಕ್ಕಿಂತಲೂ ಮಿಗಿಲಾಗಿ ಅವರು ರಾಷ್ಟ್ರವನ್ನು ಪ್ರೀತಿಸುತ್ತಿದ್ದರು ಎಂದು ಬಣ್ಣಿಸಿದರು.
ಸುರೇಶ ಹಾದಿಮನಿ, ಸುನೀಲ ಬಾರಕೇರ, ರಾಜು ಹಲಕುರ್ಕಿ, ಹರೀಶ ಕಮ್ಮಾರ, ವಸಂತ ಹರಕೇರಿ ಉಪಸ್ಥಿತರಿದ್ದರು.