ಅಹಂ ತೊಡೆದು ಹಾಕಿ: ಕಲ್ಲಯ್ಯಜ್ಜ
ಗದಗ: ಪ್ರತಿಯೊಬ್ಬರೂ ತಮ್ಮಲ್ಲಿರುವ ನಾನು ಎಂಬ ಅಹಂನ್ನು ತೊಡೆದು ಹಾಕುವುದು ಅವಶ್ಯವಾಗಿದೆ ಎಂದು ಗದಗನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.
ಮಂಗಳವಾರ ರಾತ್ರಿ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಗ್ರಾಮ ದೇವತಾ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು. ಎಲ್ಲಿ ದಾನ, ಧರ್ಮ ಇರುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಆದಿ ಶಕ್ತಿ ದೇವತೆಯ ಮಹಿಮೆ ಅಪಾರ. ಆ ದೇವತೆಗೆ ಆಕಾರ ಎನ್ನುವುದು ಇಲ್ಲ. ಆದಿ ಶಕ್ತಿಗೆ ಭಕ್ತಿಯಿಂದ ನಮಿಸಬೇಕು. ದೇವಿಯ ಆಕಾರವು ಹಾಲಿನಲ್ಲಿ ಕೂಡಿರುವ ನೀರಿನಂತೆ, ಭೂಮಿಯ ಮೇಲಿರುವ ಸಕಲ ಚರಾಚರ ಜೀವಿಗಳಲ್ಲಿ ಅವಳು ಶಕ್ತಿಯಾಗಿ, ಯುಕ್ತಿಯಾಗಿ ಕೆಲಸ ಮಾಡುತ್ತಿದ್ದಾಳೆ ಎಂದರು.
ಸಾನ್ನಿಧ್ಯ ವಹಿಸಿದ್ದ ನಿಡಗುಂದಿ ಕೊಪ್ಪದ ಶಾಖಾ ಶಿವಯೋಗ ಮಂದಿರದ ಶಿವಬಸವ ಶ್ರೀಗಳು ಮಾತನಾಡಿ, ಭೂಮಿಯ ಮೇಲೆ ಹುಟ್ಟಿ ಬಂದಿರುವ ನಾವೆಲ್ಲರೂ ಒಂದೆ. ಎಲ್ಲರೂ ಯಾವುದೇ ಧರ್ಮ, ಜಾತಿಗೆ ಸೀಮಿತರಾಗದೇ ಎಲ್ಲರೂ ಒಂದೇ ಎಂಬ ತತ್ವದ ಅಡಿಯಲ್ಲಿ ಜೀವಿಸಿದಾಗ ಮಾತ್ರ ಬದುಕು ಸಾರ್ಥಕವಾಗಲಿದೆ ಎಂದರು. ಜಗತ್ತಿನಲ್ಲಿ ಶಾಂತಿ ಸಹನೆಯಿಂದ ಜೀವನ ನಡೆಸಿದರೇ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಅದಕ್ಕಾಗಿ ನಾವೆಲ್ಲರೂ ಸ್ನೇಹ, ಪ್ರೀತಿ, ವಿಶ್ವಾಸದಿಂದ ಜೀವನವನ್ನು ನಡೆಸಬೇಕು ಎಂದರು. ಆನೆಗುಂದಿ ಸಿಂಹಾಸನ ವಿಶ್ವಕರ್ಮ ಸರಸ್ವತಿ ಪೀಠದ ಗುರುನಾಥ ಶ್ರೀಗಳು ಹಾಗೂ ಹರ್ಲಾಪುರದ ಗುರುಮೌನ ಚಿದಾನಂದಪ್ಪನಮಠದ ಮುತ್ತಪ್ಪಜ್ಜನವರು ಆಶೀರ್ವಚನ ನೀಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಜಾತ್ರೆಗಳು ಮತ್ತು ಧಾರ್ಮಿಕ ಸಭೆಗಳು ಸತತವಾಗಿ ನಡೆಯಬೇಕು ಅಂದಾಗ ಮಾತ್ರ ಜನರಲ್ಲಿ ಧರ್ಮ ಜಾಗೃತಿ ಉಂಟಾಗುವುದು. ಈ ಧರ್ಮಸಭೆ ಅತ್ಯಂತ ಪ್ರಮುಖವಾಗಿದ್ದು, ಸಾರ್ವಜನಿಕರು ಇಂತಹ ಧರ್ಮಸಭೆಗಳಲ್ಲಿ ಪಾಲ್ಗೊಂಡು ಶ್ರೀಗಳ ಹಿತನುಡಿಗಳನ್ನು ಕೇಳುವ ಮೂಲಕ ಅವುಗಳ ಅನುಕರಣೆ ಮಾಡಬೇಕು ಎಂದು ಹೇಳಿದರು. ಗಂಗಾಧರಯ್ಯ ಹಿರೇಮಠ ಪ್ರಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸುಮಂಗಲಾ ಜಗ್ಗಲ, ಉಪಾಧ್ಯಕ್ಷೆ ಶಾಂತಮ್ಮ ಹರ್ಲಾಪುರ, ಸದಸ್ಯೆ ಕಸ್ತೂರೆವ್ವ ನೀರಲಗಿ, ಶಿವಪುತ್ರವ್ವ ಕಮಾಣಿ, ಶಿವಪ್ಪ ನೇಗಲಿ, ಪಾಲಾಕ್ಷಯ್ಯ ಬಳಿಗೇರಮಠ, ರಾಮಣ್ಣ ಶಿಂಗ್ಟಾಲಕೇರಿ, ಫಕೀರಯ್ಯ ಹಿರೇಮಠ, ದೇವಪ್ಪ ಬಡಿಗೇರ, ಮುಡಿಯಪ್ಪ ಶಿಂಗ್ಟಾಲಕೇರಿ ಮುಂತಾದವರು ಉಪಸ್ಥಿತರಿದ್ದರು. ಸುರೇಶ ಪತ್ತಾರ ನಿರೂಪಿಸಿ, ವಂದಿಸಿದರು.