ಧರ್ಮ ಮಾರ್ಗದಲ್ಲಿ ಜೀವನ ಸಾಗಿಸಿ
ಕನ್ನಡಪ್ರಭ ವಾರ್ತೆ, ಗದಗ, ಮೇ. 15
ನವ ದಂಪತಿಗಳು ತಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುವತ್ತ ಶ್ರಮಿಸಬೇಕು. ಇಂದು ಎಲ್ಲೆಡೆ ಅಧರ್ಮ ತಾಂಡವಾಡುತ್ತಿದ್ದು, ಎಲ್ಲರೂ ಧರ್ಮ ಮಾರ್ಗದಲ್ಲಿ ಜೀವನ ಸಾಗಿಸುವ ಮೂಲಕ ನಾಳೆಯ ನೆಮ್ಮದಿ ಜೀವನಕ್ಕೆ ಅಣಿಯಾಗುವಂತೆ ಹೊಸಳ್ಳಿಯ ಬೂದೀಶ್ವರ ಸಂಸ್ಥಾನಮಠದ ಬೂದೀಶ್ವರ ಶ್ರೀಗಳು ಹೇಳಿದರು.
ಬುಧವಾರ ತಾಲೂಕಿನ ಅಡವಿಸೋಮಾಪುರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ 6ನೇ ವಾರ್ಷಿಕೋತ್ಸವ ಅಂಗವಾಗಿ ಜರುಗಿದ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಎಲ್ಲರ ಬದುಕು ಅರಳಬೇಕು, ದಂಪತಿಗಳು ಪರಸ್ಪರ ಅನ್ಯೊನ್ಯದಿಂದ ಬದುಕನ್ನು ಅರ್ಥೈಸಿಕೊಂಡು ಜೀವನ ಸಾಗಿಸಬೇಕು. ಧರ್ಮ ಮಾರ್ಗದಲ್ಲಿ ಎಲ್ಲರೂ ನಡೆದು ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಜೀವನದಲ್ಲಿ ಯಶಸ್ವಿಯಾಗಿರಿ. ಮನೆಯ ಹಿರಿಯರನ್ನು ಗೌರವದಿಂದ ಕಾಣಬೇಕು. ನೂತನ ದಂಪತಿಗಳ ಬದುಕು ಸುಮಧುರವಾಗಿರಲಿ ಎಂದು ದಂಪತಿಗಳಿಗೆ ಆಶೀರ್ವದಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ತಾಪಂ ಸದಸ್ಯ ಪ್ರಲ್ಹಾದ ಹೊಸಳ್ಳಿ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಯುವಜನತೆ ದುಷ್ಟಟಗಳ ದಾಸರಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಇದನ್ನರಿತು ತಮ್ಮಲ್ಲಿರುವ ದುಶ್ಚಟಗಳನ್ನು ಹೊಡದೊಡಿಸುವ ಮೂಲಕ ಸಮಾಜದಲ್ಲಿ ಉತ್ತಮ ಕೆಲಸ, ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಜನರು ಆಡಂಬರ, ದುಂದುವೆಚ್ಚ ಮಾಡದೆ ಸಾಮೂಹಿಕ ವಿವಾಹಗಳಲ್ಲಿ ವಿವಾಹವಾಗುವ ಮೂಲಕ ದುಂದುವೆಚ್ಚದ ವಿವಾಹಗಳಿಗೆ ಕಡಿವಾಣ ಹಾಕಬೇಕು. ದೇಶದಲ್ಲಿನ ಆಚಾರ, ವಿಚಾರ, ಸಂಸ್ಕೃತಿ ಪಾಲಿಸುವ ಮೂಲಕ ಸುಂದರ ಬದುಕು ನಿರ್ಮಿಸಿಕೊಳ್ಳುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗುವಂತೆ ಕರೆ ನೀಡಿದರು.
ಇದೇ ಸಂದರ್ಭ 11 ಜೋಡಿ ವಧು-ವರರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕೆಲವು ಪ್ರಮುಖರನ್ನು ಸನ್ಮಾಸಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಭೂಸೇನಾ ನಿಗಮದ ನಿರ್ದೇಶಕ ಅರುಣ ಅಣ್ಣಿಗೇರಿ, ಚನ್ನಪ್ಪ ಅಂಗಡಿ, ಆನಂದಪ್ಪ ಪುರದ, ಗ್ರಾಪಂ ಮಾಜಿ ಅಧ್ಯಕ್ಷ ಪಕ್ಕೀರಪ್ಪ ಜಡಿ, ಮಲ್ಲಪ್ಪ ಹೊಸಳ್ಳಿ, ಮಲ್ಲಪ್ಪ ಉಮ್ಮಣ್ಣವರ, ಈರಪ್ಪ ಹೊಸಳ್ಳಿ, ಈರಪ್ಪ ಮಾವರಿ, ಬಸವರಾಜ ಕದಾಂಪುರ, ಉಮೇಶ ಪೂಜಾರ, ದೇವಪ್ಪ ಕಂಬಳಿ, ಕೃಷ್ಣಪ್ಪ ಹುಡೇದ, ರಾಮಣ್ಣ ಸೋಮನಕಟ್ಟಿ, ಕುಬೇರಪ್ಪ ಹುಲಗಣ್ಣವರ, ಮಾಬುಸಾಬ ಹರಿವಾಣ, ಮುತ್ತಪ್ಪ ಖಾನಾಪುರ ಮುಂತಾದವರು ಉಪಸ್ಥಿತರಿದ್ದರು. ಲಕ್ಷ್ಮಣ ದೊಡ್ಡಮನಿ ಸ್ವಾಗತಿಸಿದರು. ಮಾಲತೇಶ ಮೇವುಂಡಿ ನಿರೂಪಿಸಿದರು.