ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೈತರಿಗೆ ದೊರೆಯದ ಬರ ಪರಿಹಾರ

Lingaraj Badiger
Updated On : 16 May 2013, 11:58 am

ಕನ್ನಡಪ್ರಭ ವಾರ್ತೆ, ನರಗುಂದ, ಮೇ 15
ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಎರಡು ವರ್ಷಗಳಿಂದ ಭೀಕರ ಬರಗಾಲ ಆವರಿಸಿದ್ದು, ಈ ಭಾಗದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅಲ್ಲದೇ ತಾಲೂಕಿನಲ್ಲಿ ಬರಗಾಲದಿಂದ ತತ್ತರಿಸಿರುವ ರೈತರಿಗೆ 2011-12ನೇ ಸಾಲಿನಲ್ಲಿ ಸರ್ಕಾರದಿಂದ ಬಿಡುಗಡೆಯಾದ ಪರಿಹಾರವು ಇಲ್ಲಿಯ ವರೆಗೂ ಸಿಗದಿರುವುದು ಇಲ್ಲಿನ ರೈತರ ದುರ್ದೈವ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಹಲವು ಜಿಲ್ಲೆಗಳು ಬರಗಾಲಕ್ಕೆ ತುತ್ತಾಗಿದ್ದವು. ಅದರಲ್ಲಿ ನರಗುಂದ ತಾಲೂಕು ಒಂದು. ಭೀಕರ ಬರಗಾಲಕ್ಕೆ ತುತ್ತಾಗಿ ಬೆಳೆದ ಬೆಳೆಯನ್ನು ಕಳೆದುಕೊಂಡಿರುವ ರೈತರೀಗ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಂದಿನ ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಖಾತೆಯೊಂದಕ್ಕೆ ರು. 1 ಸಾವಿರ ಪರಿಹಾರ ನೀಡುವಂತೆ ಸುಮಾರು ರು. 200 ಕೋಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ಅಧಿಕಾರಿಗಳು ಕೇವಲ ಅತಿ ಸಣ್ಣ ರೈತರಿಗೆ ಮಾತ್ರ ಪರಿಹಾರ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಇನ್ನೂ ಸಾವಿರಾರು ಸಣ್ಣ ರೈತರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ, ಈ ರಾಜ್ಯದಲ್ಲಿ ಬರಗಾಲಕ್ಕೆ ತುತ್ತಾಗಿರುವ ಪ್ರದೇಶದ ಅತಿ ಸಣ್ಣ ರೈತರಿಗೆ ಹಾಗೂ ರೈತರಿಗೆ ಸರ್ಕಾರವು ಪರಿಹಾರ ಧನ ಬಿಡುಗಡೆ ಮಾಡಿದೆ. ಆದರೆ, ನೀವು ಕೆಲವು ಅತಿ ಸಣ್ಣ ರೈತರಿಗೆ ಮಾತ್ರ ಹಣ ನೀಡಿದ್ದು, ಸಣ್ಣ ರೈತರಿಗೆ ಏಕೆ ಪರಿಹಾರ ಧನ ನೀಡಿಲ್ಲ ಎಂದು ಕೇಳಿದರೆ, ಅದಕ್ಕೆ ಅಧಿಕಾರಿಗಳು ಈ ಭಾಗದ ಸಣ್ಣ ರೈತರಿಗೆ ಸರ್ಕಾರವು ನೀಡಬೇಕಾದ ಪರಿಹಾರದ ಹಣವನ್ನು ಬಿಡುಗಡೆ ಮಾಡಿಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಮತ್ತೆ ಕೆಲವು ಅಧಿಕಾರಿಗಳು ಸಣ್ಣ ರೈತರಿಗೆ ನೀಡಬೇಕಾದ ಪರಿಹಾರದ ಹಣವು ಜಿಲ್ಲಾಧಿಕಾರಿಗಳ ಖಾತೆಗೆ ಬಂದು ಜಮೆ ಆಗಿದೆ. ಆದರೆ, ಈಗ ಚುನಾವಣೆ ನೀತಿ ಸಂಹಿತೆ ಇರುವುದರಿಂದಾಗಿ ನಿಮ್ಮ ಹಣ ನೀಡುವಲ್ಲಿ ಅಲ್ಪ ತಡೆಯುಂಟಾಗಿದೆ ಎಂಬ ಸಬೂಬು ನೀಡುವ ಮೂಲಕ ಜಾರಿಕೊಳ್ಳುತ್ತಿದ್ದಾರೆ. ಇದನ್ನೇ ನಂಬಿಕೊಂಡ ರೈತರು ಹಲವು ಬಾರಿ ಕಂದಾಯ ಇಲಾಖೆಗೆ ಅಲೆದಾಡಿ, ಸರ್ಕಾರವು ನೀಡುವ ಪರಿಹಾರದ ಹಣದ ದುಪ್ಪಟ್ಟು ಹಣವನ್ನು ಬಸ್‌ನ ಟಿಕೆಟ್‌ಗೆ ನೀಡಿದ್ದು, ಇದರಿಂದ ಮನನೊಂದ ಸಣ್ಣ ರೈತರಿಗೆ ಸರ್ಕಾರದಿಂದ ಬರುವ ಈ ಪರಿಹಾರದ ಹಣವೇ ಬೇಡ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.
ಅಧಿಕಾರಿಗಳ ದ್ವಿಮುಖ ನೀತಿ: ಸರ್ಕಾರವು ಒಮ್ಮೆಲೆ ಅತಿ ಸಣ್ಣ ಹಾಗೂ ಸಣ್ಣ ರೈತರಿಗೆ ಪರಿಹಾರ ಧನವನ್ನು ಬಿಡುಗಡೆ ಮಾಡಿದೆ. ಆದರೆ ಇಲ್ಲಿರುವ ಅಧಿಕಾರಿಗಳು ಅತಿ ಸಣ್ಣ ರೈತರಿಗೆ ಮಾತ್ರ ಪರಿಹಾರದ ಹಣವನ್ನು ನೀಡಿದ್ದು, ಇದರಿಂದಾಗಿ ಸಣ್ಣ ರೈತರು ಅಧಿಕಾರಿಗಳು ಮಾಡುತ್ತಿರುವ ಈ ಇಬ್ಬಗೆ ನೀತಿಗೆ ಬೇಸತ್ತಿದ್ದು, ಇದೇ ರೀತಿ ಮುಂದುವರಿದಲ್ಲಿ ಸಣ್ಣ ರೈತರು ಪರಿಹಾರದ ಹಣಕ್ಕಾಗಿ ಬೀದಿಗಿಳಿದು ಹೋರಾಟ ಮಾಡುವುದರಲ್ಲಿ ಸಂದೇಹವಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ನರಗುಂದ ತಾಲೂಕಿನ ಸಣ್ಣ ರೈತರಿಗೆ ಆಗಿರುವ ತೊಂದರೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತಾರೆಯೇ ಎಂಬುವುದನ್ನು ಕಾದು ನೋಡಬೇಕಿದೆ.
- ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement