ಸಿದ್ದು ಭಾವಚಿತ್ರಕ್ಕೆ ಕ್ಷೀರಾಭಿಷೇಕ
ಶಿರಹಟ್ಟಿ: ಸಿದ್ದರಾಮಯ್ಯನವರು ರಾಜ್ಯದ 28ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಅವರ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಭಾವ ಚಿತ್ರದೊಂದಿಗೆ ಬೃಹತ್ ಮೆರವಣಿಗೆ ನಡೆಸಿ, ಡೊಳ್ಳು ಬಾರಿಸುತ್ತ, ಸಿಹಿ ಹಂಚಿ, ಪಟಾಕಿ ಸಿಡಿಸಿ, ಸಂಭ್ರಮಿಸಿದರು. ಪಟ್ಟಣದ ಫಕೀರೇಶ್ವರ ಸಂಸ್ಥಾನ ಮಠದ ಜ. ಫಕ್ಕೀರ ಸಿದ್ಧರಾಮ ಶ್ರೀಗಳು ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಮಾತನಾಡಿ, ಕರ್ನಾಟಕದ ಜನತೆಗಾಗಿ ಮೂರು ದಶಕಗಳ ಕಾಲ ನಿರಂತರವಾಗಿ ಕೈಗೊಂಡ ಹೋರಾಟದ ಫಲವೇ ಸಿದ್ದರಾಮಯ್ಯನವರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸುವ ಸುವರ್ಣ ಅವಕಾಶ ದೊರೆತಿದೆ ಎಂದರು. ಅಪಾರ ಆಡಳಿತ ಅನುಭವ ಹೊಂದಿರುವ ಸಿದ್ದರಾಮಯ್ಯನವರು ರಾಜ್ಯವನ್ನು ಪ್ರಗತಿಪಥದತ್ತ ಕೊಂಡೊಯ್ಯಲಿ ಎಂದು ಆಶಿಸಿದರು. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ, ಪಪಂ ಸದಸ್ಯ ಎಚ್.ಡಿ. ಮಾಗಡಿ, ಸಂತೋಷ ಕುರಿ, ಬಿರೇಶ್ವರ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಘಂಟಿ ಮತ್ತಿತರರು ಮಾತನಾಡಿದರು. ರಾಘು ಕುಲಕರ್ಣಿ, ಫಕ್ಕಣ್ಣ ಪೂಜಾರ, ದೇವಪ್ಪ ಬಟ್ಟೂರ, ಪರಸಪ್ಪ ಪೂಜಾರ, ಪರಮೇಶ ಪರಬ, ಕರಿಯಪ್ಪ ಬಟ್ಟೂರ, ಫಕೀರೇಶ ಕುಳಗೇರಿ, ಕಾಶಪ್ಪ ಗೂಳಪ್ಪನವರ, ಹನುಮಂತ ಕುಳಗೇರಿ, ಶರಣಪ್ಪ ಸ್ವಾಮಿ, ಮುತ್ತಣ್ಣ ಗೊರವರ, ಲಕ್ಷ್ಮಣ ಮಾಗಡಿ, ನಿಂಗಪ್ಪ ಕರಿಗಾರ, ಬಡ್ಡೆಪ್ಪ ಬಟ್ಟೂರ, ಶಿವಪ್ಪ ಕರಿಗಾರ ಮುಂತಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.