ಹದಗೆಟ್ಟ ರಸ್ತೆ: ಸವಾರರು, ಜನರ ಪರದಾಟ
ಬ್ಯಾಡಗಿ: ಚಿಕ್ಕಬಾಸೂರು ಗ್ರಾಮದ ಮುಖ್ಯರಸ್ತೆ ಕಿತ್ತು ಹೋಗಿ ವರ್ಷಗಳೇ ಗತಿಸಿದರೂ ದುರಸ್ತಿ ಕಾಣದೇ ಸಾರ್ವಜನಿಕ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಾಹನಗಳು ಸೇರಿದಂತೆ ಜನರು ಜೀವ ಕೈಯಲ್ಲಿಡಿದು ಸಂಚರಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.
ವಾಹನಗಳ ಸುಗಮ ಸಂಚಾರಕ್ಕೆ ಉತ್ತಮ ರಸ್ತೆಗಳು ಬೇಕು, ಇದಕ್ಕಾಗಿ ಲೋಕೋಪಯೋಗಿ ಇಲಾಖೆ ಕೋಟಿಗಟ್ಟಲೇ ಹಣವ್ಯಯ ಮಾಡಿ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ತಾಲೂಕಿನ ಹಿರೇಹಳ್ಳಿ ಗ್ರಾಮದಿಂದ ಚಿಕ್ಕಬಾಸೂರು ಮೂಲಕ ಘಾಳಪೂಜಿ ಬ್ಯಾಡಗಿ ತಾಲೂಕಿನ ಗಡಿ ಭಾಗದವರೆಗೆ ಲೋಕೋಪಯೋಗಿ ಇಲಾಖೆ ಸಂಬಂಧಿಸಿದ ಸುಮಾರು 5 ಕಿ.ಮೀ. ಉದ್ದದ ಜಿಲ್ಲಾ ಮುಖ್ಯರಸ್ತೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆಳವಾದ ನೀರಿನಗುಂಡಿ ಹಾಗೂ ಕೆಸರು ಗದ್ದೆಗಳು ವಾಹನ ಸಂಚಾರರರಿಗೆ ಜೀವಭಯವನ್ನುಂಟು ಮಾಡಿದೆ.
ರಸ್ತೆಯು ಚಿಕ್ಕಬಾಸೂರು ಗ್ರಾಮದಲ್ಲಿ ಹಾಯ್ದು ಹೋಗಿರುವ ಜಿಲ್ಲಾ ಮುಖ್ಯರಸ್ತೆ ಕಥೆಯೇ ಬೇರೆ, ಒಂದು ಬಾರಿ ರಸ್ತೆಯಲ್ಲಿ ಸಂಚರಿಸಿದರೆ ಅರ್ಥವಾಗುತ್ತದೆ. ರಸ್ತೆಯಲ್ಲಿ ಸಂಚರಿಸಿದರುವ ರಸ್ತೆ ಸಹವಾಸವೇ ಬೇಡ ಎಂದು ಹಿಡಿಶಾಪ ಹಾಕಿ ಮುನ್ನಡೆದಿದ್ದಾರೆ.
ಸಂಪರ್ಕ ಗ್ರಾಮ: ತಾಲೂಕಿನ ಪಶ್ಚಿಮ ಭಾಗದಲ್ಲಿರುವ ದೊಡ್ಡಗ್ರಾಮ ಚಿಕ್ಕಬಾಸೂರು ಹಾನಗಲ್ಲ, ಹಾವೇರಿ, ಹಿರೆಕೇರೂರು ತಾ ಲೂಕುಗಳಿಗೆ ಬ್ಯಾಡಗಿಯಿಂದ ಸಂಪರ್ಕಿಸುತ್ತದೆ. ಪ್ರಮುಖ ವ್ಯಾಪಾರಿ ಕೇಂದ್ರವಾಗಿದೆಯಲ್ಲದೇ ಶೈಕ್ಷಣಿಕ ಸೌಲಭ್ಯಗಳನ್ನು ಹೊಂದಿದೆ.
ಅರೆ ಮಲೆನಾಡು ಪ್ರದೇಶವಾಗಿದ್ದರಿಂದ ಈ ಗ್ರಾಮದಲ್ಲಿ ಮಳೆ ಹೆಚ್ಚು ಪ್ರಮಾಣದಲ್ಲಿ ಸುರಿಯುತ್ತದೆ. ಈ ಮಧ್ಯೆ ರಸ್ತೆಗಳು ಸಂಚರಿಸಲು ಯೋಗ್ಯವಾಗಿಲ್ಲ. ಗ್ರಾಮದ ಎಲ್ಲ ರಸ್ತೆಗಳಲ್ಲಿ ಆಳವಾದ ಗುಂಡಿಗಳಿರುವ ಪರಿಣಾಮ ರಸ್ತೆ ಮಧ್ಯೆ ಮಳೆನೀರು ಸಂಗ್ರಹವಾಗುತ್ತಿದೆ. ಗ್ರಾಮಕ್ಕೆ ಆಗಮಿಸುವ ಪದವಿಪೂರ್ವ ಮತ್ತು ಪದವಿ ಮಹಾವಿದ್ಯಾಲಯಗಳು ನೂರಾರು ವಿದ್ಯಾರ್ಥಿಗಳು ಇದೇ ರಸ್ತೆ ಬಳಸಿ ಸಂಚರಿಸುತ್ತಿದ್ದು, ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಚಿಕ್ಕಬಾಸೂರು ಗ್ರಾಮಕ್ಕೆ ವ್ಯಾಪಾರ, ಕೃಷಿ, ಶಿಕ್ಷಣ ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಏನಿಲ್ಲವೆಂದರೂ ನಿತ್ಯ ನೂರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಕೃಷಿ ಉದ್ದೇಶಕ್ಕೆ ವ್ಯಾಪಾರಿ ಕೇಂದ್ರವೆನಿಸಿರುವ ಈ ಗ್ರಾಮಕ್ಕೆ ನಿತ್ಯ ರೈತರ ನೂರಾರು ಟ್ರ್ಯಾಕ್ಟರ್‌ಗಳು ಪ್ರವೇಶಿಸುತ್ತವೆ. ಸ್ವಲ್ಪ ಅಜಾಗರೂಕತೆಯಿಂದ ವಾಹನ ಚಲಾಯಿಸಿದರೂ ಅವಘಡ ಕಟ್ಟಿಟ್ಟ ಬುತ್ತಿ.
ಅವಾಂತರ ಸೃಷ್ಟಿಯಾಗುವ ಮುನ್ನವೇ ಲೋಕೋಪಯೋಗಿ ಇಲಾಖೆ ಜಿಲ್ಲಾ ಮುಖ್ಯರಸ್ತೆ ಸುಧಾರಣೆಗೆ ಮುಂದಾಗುವಂತೆ ರೈತಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ ಆಗ್ರಹಿಸಿದ್ದಾರೆ. ಒಂದು ವೇಳೆ ಕ್ರಮ ಜರುಗಿಸದಿದ್ದರೇ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಸದರಿ ರಸ್ತೆ ಅಗಲೀಕರಣಗೊಳಿಸಿ ದುರಸ್ತಿ ಮಾಡಬೇಕಾಗಿದ್ದ ಹಿನ್ನೆಲೆಯಲ್ಲಿ ಹಾಗೆಯೇ ಉಳಿದಿದೆ, ಅಗಲೀಕರಣ ಕಾಮಗಾರಿಯನ್ನು ಬ್ಯಾಡಗಿಯಿಂದ ಈಗಾಗಲೇ ಆರಂಭಿಸಿದ್ದು, ಬಿಡುಗಡೆಯಾದ ಅನುದಾನ ಖಾಲಿಯಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಸರ್ಕಾರದ ಸಂಬಂಧಪಟ್ಟ ಇಲಾಖೆ ಸರ್ಕಾರದ ಕಣ್ಣು ತೆರೆಸಬೇಕಿದೆ.