ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೋಟುಮಚಗಿ: ದ್ಯಾಮವ್ವದೇವಿ ಜಾತ್ರೆ

Mainashree
Updated On : 17 May 2013, 10:19 am

ಗದಗ: ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ 3 ದಿನಗಳಿಂದ ವಿಶಿಷ್ಟ ರೀತಿಯಲ್ಲಿ ಆಚರಣೆಯಾದ ಗ್ರಾಮ ದೇವತೆ (ದ್ಯಾಮವ್ವ)ನ ದೇವಸ್ಥಾನದ ಉದ್ಘಾಟನೆ, ಕಳಸಾರೋಹಣ, ಪ್ರಾಣ ಪ್ರತಿಷ್ಠಾಪನೆ ಮತ್ತು ಧರ್ಮಸಭೆಗಳು ಜರುಗಿದ್ದು ವಿಶೇಷವಾಗಿತ್ತು.
26 ವರ್ಷಗಳ ನಂತರ ಗ್ರಾಮದೇವತೆ ಹಬ್ಬವನ್ನು ಈ ಬಾರಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಚಕ್ಕಡಿ, ಟ್ರ್ಯಾಕ್ಟರ್, ಬೈಕ್‌ಗಳ ಗಾಲಿ ಬಿಚ್ಚಲಾಗಿತ್ತು. ಅಲ್ಲದೇ ಸಾರಿಗೆ ವಾಹನಗಳ ಸಹ ಗ್ರಾಮದ ಒಳಗೆ ಬಾರದಂತೆ ರಸ್ತೆಯನ್ನು ಬಂದ್ ಮಾಡಲಾಗಿತ್ತು. ವಾಹನ ನಿಲುಗಡೆ ವ್ಯವಸ್ಥೆ ಗ್ರಾಮದ ಹೊರಭಾಗದಲ್ಲಿ ಕಲ್ಪಿಸಲಾಗಿತ್ತು. ಹಲವು ವರ್ಷಗಳಿಂದ ಜಾತ್ರೆಯನ್ನು ಮಾಡದಿರುವುದರಿಂದ ಈ ಬಾರಿ ಅದ್ದೂರಿಯಾಗಿ ಹಮ್ಮಿಕೊಂಡಿದ್ದು, ಊರಿನಲ್ಲಿರುವ ಎಲ್ಲ ಧರ್ಮದ ಜನರ ಸಂಬಂಧಿಕರು ಜಾತ್ರೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಅಲ್ಲದೇ ಬಂದ ಮಹಿಳೆಯರಿಗೆ ಹಸಿರುಬಳೆ, ಹಸಿರು ಸೀರೆಯನ್ನು ಉಡುಗೊರೆಯಾಗಿ ನೀಡುವುದು ವಿಶೇಷ.
ಹೋಮ ಹವನಗಳು: ಗ್ರಾಮದಲ್ಲಿ ನಡೆದ ಗ್ರಾಮ ದೇವತೆಯ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ದೇವತಾ ಪೂಜೆ, ಹೋಮ, ಶ್ರೀಸೂಕ್ತ ಹೋಮ, ದುರ್ಗಾ ಹೋಮ, ಚಂಡಿಹೋಮ, ಧಾನ್ಯಧಿವಾಸ, ನವಗ್ರಹ ಪ್ರತಿಷ್ಠಾಪನೆ, ನೇತ್ರೋನ್ಮಿಲನ, ಕದಳಿ, ಕುಷ್ಮಾಂಡ, ದರ್ಪಣದಲ್ಲಿ ಬಿಂಬ ದರ್ಶನ ಸೇರಿದಂತೆ ವಿವಿಧ ರೀತಿಯ ಹೋಮ ಹವನ ನೆರವೇರಿಸಲಾಯಿತು. ಹಲವು ಶ್ರೀಗಳಿಂದ ಧರ್ಮಸಭೆಗಳು ಜರುಗಿದವು.
ಚಳೆ ಆಡುವುದು: ಗ್ರಾಮ ದೇವತೆಯಾದ ದ್ಯಾಮವ್ವ(ಕಾಳಿಕಾ) ದೇವಿಯು ಕುಂಭ ಮೇಳದೊಂದಿಗೆ ಗ್ರಾಮದ ಚೌತಾಕಟ್ಟೆ (ಊರಿನ ಮುಖ್ಯದ್ವಾರದಲ್ಲಿರುವ ಕಟ್ಟೆ)ಗೆ ಬಂದು ತವರು ಮನೆಗೆ ಹೋಗಿ ಉಡಿ ತುಂಬಿಸಿಕೊಂಡು ಮರಳಿ ಚೌತಾಕಟ್ಟೆಗೆ ಬರುವುದು. ಗ್ರಾಮ ದೇವತೆಯು ಚೌತಾಕಟ್ಟೆಯಿಂದ ಸಕಲ ವಾಧ್ಯ ವೈಭವಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಚಳೆ ಆಡಿ(ಉಡಿತುಂಬುವುದು) ಪುನಃ ದೇವಸ್ಥಾನಕ್ಕೆ ಆಗಮಿಸುವುದು ವಿಶೇಷವಾಗಿತ್ತು.
ಶೇಖಪ್ಪ ರಮಾಣಿ, ಸೋಮು ಹಡಪದ, ಮುತ್ತಣ್ಣ ನೀರಲಗಿ, ನಾಗಪ್ಪ ಗೋದಿ, ಶಿವಪ್ಪ ನೇಗಲಿ, ಹುಚ್ಚೀರಪ್ಪ ಬಡಿಗೇರ, ಎಂ.ಜಿ. ಪಾಟೀಲ, ಮುದಕಪ್ಪ ಹಡಪದ, ಮಲ್ಲಪ್ಪ ಕಿತ್ತೂರ, ಬಸವರಾಜ ನೀರಲಗಿ, ಮಲ್ಲಪ್ಪ ಚವಡಿ, ಮಲ್ಲಿಕಾರ್ಜುನ ಸಂಕನಗೌಡ್ರ, ಗ್ರಾಪಂ ಸದಸ್ಯ ಎಂ.ಆರ್. ಬೂದಿಹಾಳ, ಮುಡಿಯಪ್ಪ ಶಿಂಗ್ಟಾಲಕೇರಿ, ಯಲ್ಲಪ್ಪ ಗೆಜ್ಜಿ, ದೇವಾನಂದ ಹೊಸಮನಿ, ದೇವಪ್ಪ ಬಡಿಗೇರ ಸೇರಿದಂತೆ ನಾರಾಯಣಪುರ, ನರೇಗಲ್ಲ, ಗದಗ, ಧಾರವಾಡ, ಹುಬ್ಬಳ್ಳಿ, ಬಳ್ಳಾರಿ, ಕೊಪ್ಪಳ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement