ಮೃತ್ಯು ಗೆದ್ದ 71ರ ವೃದ್ಧ!
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಗದಗ, ಮೇ 16
100 ಅಡಿ ಆಳದ ಹಾಳು ಬಾವಿಗೆ ಬಿದ್ದಿದ್ದ 71 ವರ್ಷದ ವೃದ್ಧನೋರ್ವನು ಒಂದು ರಾತ್ರಿಯಿಡೀ ಅಲ್ಲೇ ಕಳೆದು ಪವಾಡ ಸದೃಶ್ಯವಾಗಿ ಬದುಕುಳಿದ ಬಂದ ಘಟನೆ ಗುರುವಾರ ಬೆಳಗ್ಗೆ ಇಲ್ಲಿಯ ಬೆಟಗೇರಿಯಲ್ಲಿ ನಡೆದಿದೆ.
ಬೆಟಗೇರಿಯ ನಿವಾಸಿ ಮಹ್ಮದಅಲಿ ಕೊಪ್ಪಳವಾಲೆ ಎಂಬ ವೃದ್ಧನು ನಗರದ ಹೆಲ್ತ್‌ಕ್ಯಾಂಪ್ ಬಳಿ ಇರುವ ಕಿತ್ತೂರ ರಾಣಿ ಚನ್ನಮ್ಮ ಉದ್ಯಾನವನದಲ್ಲಿ ಸಂಜೆ ವಿಶ್ರಾಂತಿ ಪಡೆಯಲು ಹೋಗಿದ್ದಾನೆ. ಅಲ್ಲಿಂದ ಮರಳಿ ಮನೆಗೆ ಮರಳುವ ವೇಳೆ ದಾರಿಯಲ್ಲಿನ ಬಾವಿ ಕಟ್ಟೆಯ ಮೇಲೆ ಕುಳಿತು ಮತ್ತಷ್ಟು ವಿಶ್ರಾಂತಿ ಪಡೆಯಲು ಮುಂದಾಗಿದ್ದಾನೆ. ಆ ಸಂದರ್ಭದಲ್ಲಿ ಆತನ ಚಪ್ಪಲಿ ಜಾರಿ ಬಾವಿಯೊಳಗೆ ಬಿದ್ದಿದೆ. ಇದನ್ನು ನೋಡಲು ಹೋಗಿದ್ದ ಮಹ್ಮದಅಲಿಯು ಕಾಲು ಜಾರಿ ಬಾವಿಯಲ್ಲಿ ಬಿದ್ದಿದ್ದಾನೆ. ಈ ಘಟನೆ ನಡೆದಿದ್ದು ಸಂಜೆ 7 ಗಂಟೆಗೆ.
ರಾತ್ರಿಯಿಡಿ ಬಾವಿಯಲ್ಲಿ: ಮಹ್ಮದಅಲಿಯು ಬಾವಿಯಲ್ಲಿ ಬಿದ್ದ ತಕ್ಷಣ ಚೀರಿದ್ದಾನೆ, ಕೂಗಿದ್ದಾನೆ. ಆದರೆ ರಾತ್ರಿಯಾಗಿದ್ದರಿಂದ ಆ ಸಂದರ್ಭದಲ್ಲಿ ಯಾರೂ ಅವನ ನೆರವಿಗೆ ಬಂದಿಲ್ಲ. ಬುಧವಾರ ರಾತ್ರಿ 7 ಗಂಟೆಯ ಸುಮಾರಿಗೆ ಬಿದ್ದಿದ್ದು, ಬೆಳಗಿನವರೆಗೂ ಬಾವಿಯಲ್ಲಿಯೇ ಕಾಲ ಕಳೆದಿದ್ದಾನೆ. ಮಹ್ಮದಅಲಿ ಮಾಜಿ ಯೋಧನಾಗಿದ್ದು, ಬೇರೆ ಯಾರಾದರೂ ಆಗಿದ್ದಲ್ಲಿ ಹೆದರಿ ಸಾವನ್ನಪ್ಪುತ್ತಿದ್ದರೇನೋ, ಆದರೆ ಧೈರ್ಯವಂತರಾಗಿದ್ದ ಈ ವೃದ್ಧ ರಾತ್ರಿಯಿಡೀ ಬಾವಿಯಲ್ಲಿಯೇ ಕಾಲ ಕಳೆದು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾನೆ.
ಸಂಬಂಧಿಕರಿಂದ ಹುಡುಕಾಟ: ಬುಧವಾರ 5 ಗಂಟೆಯ ಸುಮಾರಿಗೆ ಹೋದ ಮಹ್ಮದಅಲಿ ಕೊಪ್ಪಳವಾಲೆಯನ್ನು ಸಂಬಂಧಿಕರು ಹುಡುಕದ ಜಾಗವೇ ಇಲ್ಲ. ವಾಯು ವಿಹಾರಕ್ಕೆ ಹೋಗುವ ಸ್ಥಳ ಸೇರಿದಂತೆ ಎಲ್ಲೆಡೆ ಮಹ್ಮದ ಅಲಿಯನ್ನು ಹುಡುಕಿದ್ದಾರೆ. ರಾತ್ರಿ ಬರಬಹುದು ಎಂದು ತಿಳಿದು ಸುಮ್ಮನಾಗಿದ್ದರು. ಆದರೆ, ರಾತ್ರಿ 11 ಗಂಟೆಯವರೆಗೂ ಬಾರದಿರುವುದನ್ನು ಕಂಡ ಮನೆಯವರು ಗದಗ-ಬೆಟಗೇರಿ ಅವಳಿ ನಗರದಾದ್ಯಂತ ಹುಡುಕಿದ್ದಾರೆ. ಎಲ್ಲಿಯೂ ಕಾಣದಿರುವುದನ್ನು ತಿಳಿದು ತಮ್ಮ ಸಂಬಂಧಿಕರಿಗೆ ದೂರವಾಣಿಯ ಮೂಲಕ ಸಂಪರ್ಕಿಸಿದ್ದಾರೆ. ಇಲ್ಲಿ ಎಲ್ಲಿಯೂ ಇಲ್ಲದ ವಿಷಯವನ್ನು ಅರಿತ ಕುಟುಂಬದವರು ಬೆಳಗ್ಗೆ ಅಕ್ಕಪಕ್ಕದ ಊರುಗಳಿಗೆ ತೆರಳಿ ಹುಡುಕುವ ಯೋಚನೆಯಲ್ಲಿದ್ದರು. ಆದರೆ, ಬೆಳಗಿನ ಜಾವದ ವೇಳೆಯಲ್ಲಿ ಕಿತ್ತೂರ ರಾಣಿ ಚನ್ನಮ್ಮ ಉದ್ಯಾನಕ್ಕೆ ಬರುವ ಸಾರ್ವಜನಿಕರು ಬಾವಿಯಲ್ಲಿ ಕೇಳುತ್ತಿರುವ ಶಬ್ದವನ್ನು ಗಮನಿಸಿ, ಬೆಟಗೇರಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಅವರ ಮಾಹಿತಿ ಆಧಾರದಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಳ್ಳಂಬೆಳಗ್ಗೆ ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ, ಬಾವಿಯಲ್ಲಿ ಬಿದ್ದ ವೃದ್ಧನನ್ನು ಹೊರಕ್ಕೆ ತೆಗೆಯುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಅಗ್ನಿಶಾಮಕದ ದಳದ ಸಿಬ್ಬಂದಿ ಕೆ.ಎಂ. ಹುಯಿಲಗೋಳ, ಆರ್.ಬಿ. ಕೆಂಗಾರ, ಐ.ಐ. ಬಡಿಗೇರ, ಎಂ.ಎಚ್. ಕಿಲ್ಲಾದಾರ ಮುಂತಾದವರು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.