ಯಲ್ಲಪ್ಪನ ಶಪಥ ಈಡೇರಿತಪ್ಪ
ಮುಂಡರಗಿ: ಕಾಂಗ್ರೆಸ್ ಎಂದರೆ ಇಂದಿರಾಗಾಂಧಿ ಹುಟ್ಟುಹಾಕಿದ ಪಕ್ಷ. ಅದರ ಮೇಲೆ ನಮಗೆ ಸಾಕಷ್ಟು ಗೌರವವಿದೆ ಎಂದು ಹೇಳುವವರನ್ನು ನೋಡಿದ್ದೇವೆ. ಆದರೆ, ಮುಂಡರಗಿಯ ಯಲ್ಲಪ್ಪ ಹೊಂಬಳಗಟ್ಟಿ ಕಾಂಗ್ರೆಸ್ ಮೇಲಿನ ಅಭಿಮಾನದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವವರೆಗೂ ತನ್ನ ತಲೆಗೂದಲು ಹಾಗೂ ಗಡ್ಡವನ್ನು ತೆಗೆಯುವುದಿಲ್ಲವೆಂದು ಶಪಥ ಮಾಡಿದ್ದ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಮೇ 18ರಂದು ಬಳ್ಳಾರಿ ಜಿಲ್ಲೆಯ ಮದಲಗಟ್ಟಿಯ ಹನುಮಂತ ದೇವರ ದೇವಸ್ಥಾನದಲ್ಲಿ ತನ್ನ ಹರಕೆ ತೀರಿಸಲಿದ್ದಾನೆ.
ಮುಂಡರಗಿಯಲ್ಲಿ ಹೋಟೆಲ್ ನಡೆಸುತ್ತಿರುವ ಯಲ್ಲಪ್ಪ 1972ರಲ್ಲಿ ಕಾಂಗ್ರೆಸ್ಗೆ ಮೊಟ್ಟ ಮೊದಲ ಬಾರಿಗೆ ವೋಟು ಹಾಕುವ ಮೂಲಕ ತನ್ನ ಮತದಾನದ ಹಕ್ಕು ಚಲಾಯಿಸಿದ್ದ. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ಗೆ ನಿಷ್ಠರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಇವರು ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಪರವಾಗಿ ಅವರ ಕ್ಷೇತ್ರಕ್ಕೆ ತೆರಳಿ ಪ್ರಚಾರ ಕೈಗೊಂಡಿದ್ದರು. ಈಚೆಗೆ ಜರುಗಿದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಾ.ಜಿ. ಪರಮೇಶ್ವರ ಅವರ ವಿಧಾನಸಭಾ ಕ್ಷೇತ್ರದ ಕೊರಟಗೇರಿಗೆ ತೆರಳಿ ಅಲ್ಲಿಯೂ ಕಾಂಗ್ರೆಸ್ ಪರವಾಗಿ ಪ್ರಚಾರ ಕೈಗೊಂಡಿದ್ದರು.
9 ವರ್ಷಗಳಿಂದ ಮುಂಡರಗಿ ತಾಲೂಕು ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಯಲ್ಲಪ್ಪ ಹೊಂಬಳಗಟ್ಟಿ ತನ್ನ 56ರ ವಯಸ್ಸಿನಲ್ಲಿಯೂ ಕಾಂಗ್ರೆಸ್ಗಾಗಿ ಶ್ರಮಿಸುತ್ತಾ ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕ್ರಮಗಳಿದ್ದರೆ ಅಲ್ಲಿ ತಪ್ಪದೇ ಹಾಜರಾಗುತ್ತಾರೆ. ಅಲ್ಲದೆ ತಮ್ಮ ಹಿರಿ ಮಗನಾದ ನಾಗರಾಜ ಹೊಂಬಳಗಟ್ಟಿಯನ್ನೂ ಮೊ ದಲು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ನಂತರ ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಪ್ರೊತ್ಸಾಹಿಸಿದ್ದಾರೆ.
ಹನುಮಂತ ದೇವರಲ್ಲಿ ನಾನು ಮಾಡಿದ್ದ ಶಪತ ಹಾಗೂ ರಾಜ್ಯದ ಎಲ್ಲ ಮತದಾರರ ಆರ್ಶಿವಾದದ ಫಲವಾಗಿ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳು ಹಾಗೂ ರಾಜ್ಯದ 121 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದೆ. ಆದ್ದರಿಂದ ಮೇ 18ರಂದು ಮದಲಗಟ್ಟೆಯ ಹನುಮಂತ ದೇವರ ದೇವಸ್ಥಾನಕ್ಕೆ ತೆರಳಿ ತಲೆಗೂದಲು ಹಾಗೂ ಗಡ್ಡವನ್ನು ತೆಗೆಯುತ್ತೇನೆ.
-ಯಲ್ಲಪ್ಪ ಹೊಂಬಳಗಟ್ಟಿ