ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುದ್ದಿ ಸಂಕ್ಷೇಪ

Mainashree
Updated On : 17 May 2013, 10:20 am

ರಂಗಶಿಕ್ಷಣದಲ್ಲಿ ಡಿಪ್ಲೋಮಾ: ಆಹ್ವಾನ
ಗದಗ:
ಕರ್ನಾಟಕ ಸರ್ಕಾರ ಸ್ಥಾಪಿಸಿರುವ ಒಂದು ವರ್ಷದ ರಂಗ ಶಿಕ್ಷಣದಲ್ಲಿ ಡಿಪ್ಲೋಮಾ ಕೋರ್ಸನ್ನು ಜುಲೈ 1ರಿಂದ ಆರಂಭಿಸಿದೆ. ಈ ಕೋರ್ಸಗೆ ಕರ್ನಾಟಕ ಮುಕ್ತ ವಿವಿ ಮಾನ್ಯತೆ ನೀಡಿದೆ. 2013-14ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಕನಿಷ್ಠ ವಿದ್ಯಾರ್ಹತೆ ದ್ವಿತೀಯ ಪಿಯುಸಿ ಹೊಂದಿರುವ, 18ರಿಂದ 28ರೊಳಗಿನ ವಯೋವುತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಿಂಗಳಿಗೆ ರು. 2 ಸಾವಿರ ವಿದ್ಯಾರ್ಥಿ ವೇತನ ಹಾಗೂ ಉಚಿತ ವಸತಿ ನೀಡಲಾಗುವುದು. 1 ವರ್ಷದ ರಂಗ ಶಿಕ್ಷಣವನ್ನು ಪೂರೈಸಿದ ವಿದ್ಯಾರ್ಥಿಯು ಮುಂದಿನ 2 ವರ್ಷಗಳೂ ಹೆಚ್ಚಿನ ವೃತ್ತಿಪರ ನಟನ ಪರಿಣತಿ ತರಬೇತಿಗಾಗಿ ರಂಗಾಯಣ ರೆಪರ್ಟರಿಯಲ್ಲಿ ಕಿರಿಯ ಕಲಾವಿದನಾಗಿ ಒಪ್ಪಂದದ ಮೇಲೆ 2 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸುವುದು. ಈ 2 ವರ್ಷದಲ್ಲಿ ನಿಗದಿತ ಸಂಭಾವನೆ ನೀಡಲಾಗುವುದು. ಈ ಸೇವಾವಧಿಯನ್ನು ಪುರ್ಣಗೊಳಿಸಿದ ವಿದ್ಯಾರ್ಥಿಯು ವೃತ್ತಿಪರ ಪರಿಣತಿ ಪ್ರಮಾಣ ಪತ್ರವನ್ನು ಪಡೆಯಲು ಅರ್ಹನಾಗುತ್ತಾನೆ. ರಂಗಶಾಲೆಗೆ ಸೇರಬಯಸುವ ವಿದ್ಯಾರ್ಥಿಯು ರು. 50ಗಳ ಡಿಡಿ ಅಥವಾ ಮನಿಯಾರ್ಡರನ್ನು ನಿರ್ದೇಶಕರು, ರಂಗಾಯಣ, ಕಲಾಮಂದಿರ ಆವರಣ, ವಿನೋಭಾ ರಸ್ತೆ, ಮೈಸೂರು-5755 ಈ ಹೆಸರಿನಲ್ಲಿ ಮೇ 30ರೊಳಗೆ ಕಳುಹಿಸಿ ಪರಿಚಯ ಪತ್ರಿಕೆ ಹಾಗೂ ಅರ್ಜಿ ಪಡೆಯಬಹುದು. ಅಥವಾ ಕಚೇರಿಯ ಅವಧಿಯಲ್ಲಿ ಖುದ್ದಾಗಿ ಬಂದು ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 15ರೊಳಗೆ ತಲುಪುವಂತೆ ಅಂಚೆ ಮೂಲಕ ಅಥವಾ ಖುದ್ದಾಗಿ ಬಂದು ಸಲ್ಲಿಸಬಹುದು. ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ವಿದ್ಯಾರ್ಥಿಯ ಪ್ರತಿಭೆ, ರಂಗಾಸಕ್ತಿ ಪ್ರಧಾನವಾಗಿ ಪರಿಗಣಿಸಲಾಗುವುದು.  ಸರ್ಕಾರದ ನಿಯಮಾನುಸಾರ ಮೀಸಲಾತಿಯ ಕ್ರಮ ಅನುರಿಸಲಾಗುವುದು. ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನ ಜೂನ್ 20 ಹಾಗೂ 21ರಂದು ರಂಗಾಯಣದ ಆವರಣದಲ್ಲಿ ನಡೆಸಲಾಗುವುದು. ಮಾಹಿತಿಗಾಗಿ ರಂಗಾಯಣ ಕಚೇರಿಯ ದೂರವಾಣಿ 0821-2512639, ಮೊ. 9448322815 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಪಿಯುಸಿ: ಅಂಕಪಟ್ಟಿ, ಒಎಂಆರ್ ಲಭ್ಯ
ಗದಗ:
2013ರ ಮಾರ್ಚ್ ಪಿಯುಸಿ ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಅಂಕಪಟ್ಟಿ ವ ಅರ್ಜಿ (ಒಎಂಆರ್)ಗಳು ಬಂದಿರುತ್ತವೆ. ಜಿಲ್ಲೆಯ ಎಲ್ಲ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ತಮ್ಮ ಕಾಲೇಜಿಗೆ ಸಂಬಂಧಿಸಿದ ಅಂಕಪಟ್ಟಿ, ಅರ್ಜಿ (ಓಎಂಆರ್) ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಕಚೇರಿಯಿಂದ ಪಡೆದು ಮುಂದಿನ ಕ್ರಮ ಜರುಗಿಸಲು ಪಪೂ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ವಿದ್ಯುತ್ ವ್ಯತ್ಯಯ
ಗದಗ:
  ಜಿಲ್ಲೆಯ ಶಿರಹಟ್ಟಿ 33/11 ಕೆವಿ ಹೊಳೆಇಟಗಿ ಉಪವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಮೇ 17ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಾರಣ 33/11 ಕೆವಿ ಹೊಳೆಇಟಗಿ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಹೊಳೆಇಟಗಿ, ಸಾಸಲವಾಡ, ಹೆಬ್ಬಾಳ, ಕನಕವಾಡ, ಚೌಡಾಳ, ತೊಳಲಿ, ಕಲ್ಲಾಗನೂರ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಉದ್ಘಾಟನೆ
ಗದಗ:
ನಗರದ ಮಹೇಂದ್ರಕರ ವೃತ್ತದ ಹತ್ತಿರದ ಕರ್ನಾಟಕ ಬ್ಯಾಂಕ್‌ನ ಮೇಲೆ ನೂತನವಾಗಿ ಆರಂಭಿಸಲಾದ ನ್ಯೂ ಎಕ್ಸಲೆಂಟ್ ಸಿಇಟಿ ಕೋಚಿಂಗ್ ಸೆಂಟರ್‌ನ ಉದ್ಘಾಟನಾ ಸಮಾರಂಭ ಹಾಗೂ 3 ದಿನಗಳ ಕಾಲ ನಡೆಯುವ ಸಿಇಟಿ ಉಚಿತ ಕಾರ್ಯಾಗಾರ ತರಬೇತಿ ಶಿಬಿರ ಮೇ 17ರ ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಸ್. ಗೌಡರ ಉದ್ಘಾಟನೆ ನೆರವೇರಿಸುವರು. ಸಂಸ್ಥೆಯ ಆಡಳಿತಾಧಿಕಾರಿ ಎಂ.ಎಸ್. ಹುಲ್ಲೂರ ಅಧ್ಯಕ್ಷತೆ ವಹಿಸುವರು. ಶಂಕರಸಿಂಗ್ ರಜಪೂತ, ಗದಗ ಶಹರ ಠಾಣೆಯ ಪಿಎಸ್‌ಐ ಕೃಷ್ಣವೇಣಿ ಗುರ್ಲಹೊಸೂರ, ಎಂ.ಎಸ್. ಬಿಂಗಿ, ಉಪನ್ಯಾಸಕ ಅನಿಲ ವೈದ್ಯ, ಫರೀದಅಹ್ಮದ ಸುಂಕದ, ಅಬ್ದುಲ್‌ರಜಾಕ ಡೆಂಕೇದ ಮುಂತಾದವರು ಪಾಲ್ಗೊಂಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement