ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಜಾಗೃತಿ
ಗದಗ: ಬಯಲು ಮಲ ವಿಸರ್ಜನೆಯಿಂದ ಪರಿಸರ ನಾಶವಾಗುತ್ತಿದ್ದು ಹಾಗೂ ಅಶುದ್ಧ ನೀರು ಸೇವನೆಯಿಂದ ಹಲವಾರು ಕಾಯಿಲೆ ಬರುತ್ತಿದ್ದು, ಇಂತಹ ಸಂದರ್ಭದಲ್ಲಿ ನೀರು, ನೈರ್ಮಲ್ಯ ಉಳಿವಿಗಾಗಿ ಧರ್ಮಸ್ಥಳ ಸಂಸ್ಥೆಯಿಂದ ಜನರಿಗೆ ಶೌಚಾಲಯ ಉಪಯುಕ್ತತೆಯ ಬಗ್ಗೆ ಹಾಗೂ ಶುದ್ಧ ನೀರಿನ ಬಗ್ಗೆ ಜಾಗೃತಿ ಮೂಡಿಸಲು ಸಂಚಾರಿ ವಾಹನವನ್ನು ಮಾಡಿದ್ದು, ಜಾಗೃತಿ ಯಶಸ್ವಿಯಾಗಲೆಂದು ಒಕ್ಕೂಟದ ಅಧ್ಯಕ್ಷೆ ಲಕ್ಷ್ಮವ್ವ ವಡ್ಡರ ಹೇಳಿದರು.
ಈಚೆಗೆ ಅವರು ತಾಲೂಕಿನ ಕಳಸಾಪುರ ಗ್ರಾಮದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬರೂ ನೀರನ್ನು ಸಂರಕ್ಷಿಸುವುದು ಅತ್ಯವಶ್ಯ. ಇಂದು ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ಸಿಗದೇ ಸಂಕಷ್ಟ ಎದುರಿಸುತ್ತಿರುವುದನ್ನು ನಾವು ಇಂದಿಗೂ ಕಾಣುತ್ತೇವೆ. ಹಾಗಾಗಿ ನೀರು ಸಂಗ್ರಹಿಸುವ ಮೂಲಕ ಮುಂದಿನ ಪೀಳಿಗೆಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಗ್ರಾಮಸ್ಥರಿಗೆ ಮಳೆ ನೀರಿನ ಸಂಗ್ರಹ, ಶೌಚಾಲಯ ರಚನೆಯ ಬಗ್ಗೆ ಹಾಗೂ ಶುದ್ಧ ನೀರಿನ ಸೇವನೆಯ ಕುರಿತು ಜಾಗೃತಿ ಮೂಡಿಸುವ ಸಂಚಾರಿ ವಾಹನವನ್ನು ಉದ್ಘಾಟಿಸಲಾಗಿದ್ದು, ಇದು ಗ್ರಾಮದ ತುಂಬ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಯೋಜನೆಯ ಕೆಮಿಕಲ್ ಎಂಜಿನಿಯರ್ ರಮೇಶ ಚಳಗೇರಿ, ಸಿವಿಲ್ ಎಂಜಿನಿಯರ್ ಕೃಪಾಲಿ, ಯೋಜನೆಯ ಸಂಯೋಜಕ ವೆಂಕಟೇಶ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.