ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದುವುದು ಅವಶ್ಯ: ಅಜಿತ
ಕನ್ನಡಪ್ರಭ ವಾರ್ತೆ, ಗದಗ, ಮೇ 17
ಪ್ರತಿಯೊಬ್ಬರೂ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದುವುದು ಅತ್ಯವಶ್ಯ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನ ಗದಗ ಜಿಲ್ಲೆಯ ಪ್ರಾದೇಶಿಕ ಪ್ರಬಂಧಕ ಅಜಿತ ಉಪಾಧ್ಯಾಯ ಹೇಳಿದರು.
ಈಚೆಗೆ ಅವರು ಜಿಲ್ಲೆಯ ನರಗುಂದ ತಾಲೂಕಿನ ಬೈರನಹಟ್ಟಿಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹಾಗೂ ಲೀಡ್ ಬ್ಯಾಂಕ್ ಆಶ್ರಯದಲ್ಲಿ ಜರುಗಿದ ಆರ್ಥಿಕ ಸಾಕ್ಷರತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಬ್ಯಾಂಕ್ನಲ್ಲಿ ಖಾತೆ ಹೊಂದುವ ಮೂಲಕ ಬ್ಯಾಂಕಿಂಗ್ ವ್ಯವಹಾರಗಳ ಕುರಿತು ತಿಳಿವಳಿಕೆ ಹೊಂದುವುದು ಅತ್ಯವಶ್ಯಕ. ಜನರು ಬ್ಯಾಂಕ್ಗಳಲ್ಲಿ ಖಾತೆಗಳನ್ನು ಹೊಂದುವ ಮೂಲಕ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಪಡೆದುಕೊಳ್ಳುವ ಅರಿವು ಹೊಂದಬೇಕಾಗಿದೆ ಎಂದರು.
ಲೀಡ್ ಬ್ಯಾಂಕ್ನ ಉಪಪ್ರಬಂಧಕ ಅನಿಲ ಕಾಂಬ್ಳೆ ಮಾತನಾಡಿ, ಗದಗ ಜಿಲ್ಲೆಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ತೆರೆದಿರುವ ಅತಿ ಕಿರು ಶಾಖೆಗಳ ಕಾರ್ಯವೈಖರಿ ಹಾಗೂ ಭಾರತ ಸರ್ಕಾರದ ಮಹತ್ತರ ಯೋಜನೆಗಳಲ್ಲಿ ಒಂದಾದ ವಿತ್ತೀಯ ಸೇರ್ಪಡೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಪಾತ್ರವನ್ನು ಶ್ಲಾಘಿಸಿದರು.
ಗೋಪಾಲ್ ಲಮಾಣಿ ಅವರಿಂದ ಉಪನ್ಯಾಸ ಜರುಗಿತು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನ ನರಗುಂದ ಶಾಖೆಯ ಪ್ರಬಂಧಕ ಶ್ರೀಪಾದರಾವ್ ಸ್ವಾಗತಿಸಿ, ನಿರೂಪಿಸಿದರು. ರಮೇಶ ದಂಡಿನ ವಂದಿಸಿದರು.