ಸಮಗ್ರ ಕೃಷಿ ಅಳವಡಿಸಿಕೊಳ್ಳಿ: ಪೊಲೀಸ್ಪಾಟೀಲ್
ಹಾನಗಲ್ಲ: ರೈತ ಸಮುದಾಯ ತಮ್ಮ ಜಮೀನಿನಲ್ಲಿ ಕೇವಲ ಒಂದೇ ಬೆಳೆ ಬೆಳೆಯುವುದಕ್ಕಿಂತ ಸಮಗ್ರ ಕೃಷಿ ಅಳವಡಿಸಿಕೊಳ್ಳುವ ಮೂಲಕ ಆರ್ಥಿಕ ಭದ್ರತೆ ಹೊಂದಬೇಕೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಯೋಜನಾಧಿಕಾರಿ ಜಿ.ಡಿ. ಪೊಲೀಸ್ ಪಾಟೀಲ ಸಲಹೆ ನೀಡಿದರು.
ತಾಲೂಕಿನ ವರ್ದಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಸಮಗ್ರ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿರು.
ಇಂದು ಕೃಷಿ ಬದುಕು ವರುಣನ ಅವಕೃಪೆಗೊಳಗಾಗಿ ಸಮಸ್ಯೆ ಎದುರಿಸುವಂತಾಗಿದೆ. ರೈತರು ಒಂದೇ ವಿಧಧ ಬೆಳೆಯ ಮೇಲೆ ಅವಲಂಬಿತನಾದರೆ. ಹವಾಮಾನ ವೈಪರಿತ್ಯ, ಅತಿವೃಷ್ಠಿ-ಅನಾವೃಷ್ಠಿಗಳಿಂದ ಹಾನಿ ಅನುಭವಿಸುವ ಸಾಧ್ಯತೆಗಳು ಹೆಚ್ಚು. ಈ ಹಿನ್ನಲೆಯಲ್ಲಿ ಇರುವಷ್ಟು ಕೃಷಿಭೂಮಿಯಲ್ಲಿ ರೈತರು ಜಾಣ್ಮೆಯಿಂದ ವಿವಿಧ ತಳಿಗಳ ಹಲವು ಬೆಳೆಗಳನ್ನು ಬೆಳೆಯುವದರಿಂದ ಒಂದಿಲ್ಲೊಂದು ಫಸಲು ರೈತನ ಕೈಸೇರಲು ಸಾಧ್ಯವಾಗುತ್ತದೆ.
ಉಪ ಕಸಬು ಅಗತ್ಯ: ಕೃಷಿಕ ಆರ್ಥಿಕ ಹೊಡೆತಗಳಿಂದ ತಪ್ಪಿಸಿಕೊಳ್ಳಬೇಕಾದರೆ ಉಪ ಉತ್ಪನ್ನಗಳಾದ ಆಡು ಸಾಕಾಣಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಕೈಗೊಂಡು ಹೆಚ್ಚಿನ ಆರ್ಥಿಕ ಆದಾಯ ಪಡೆಯಲು ಮುಂದಾಗಬೇಕೆಂದು ಮಹಿಳೆಯರಿಗೆ ಕರೆ ನೀಡಿದರು.
ಸಾವಯವ ಕೃಷಿ ಅಳವಡಿಸಿಕೊಳ್ಳಿ: ಕೃಷಿಭೂಮಿ ರಾಸಾಯನಿಕ ರಸಗೊಬ್ಬರವನ್ನು ಅಧಿಕವಾಗಿ ಬಳಸುತ್ತಿರುವುದರಿಂದ ವಿಷಯುಕ್ತವಾಗುವುದರ ಜೊತೆಗೆ ಬಂಜರುಗೊಳ್ಳುತ್ತಿದೆ. ಈ ಭೂಮಿಯಲ್ಲಿ ಬೆಳೆದ ಫಸಲು ಹಾಗೂ ತರಕಾರಿಗಳು ವಿಷಯುಕ್ತಗೊಂಡು ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆಯಲ್ಲಿ ರೈತ ಸಮುದಾಯ ರಾಸಾಯನಿಕ ರಸಗೊಬ್ಬರ ಬಳಸುವ ಬದಲು ಸಾವಯವ ಕೃಷಿಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸೇವಾ ಪ್ರತಿನಿಧಿ ನಂದಾ ಬಡಿಗೇರ, ಪುಷ್ಪಾ, ಕ್ಯಾತಪ್ಪನವರ ಹಾಗೂ ಸ್ವ-ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.