ಸುದ್ದಿ ಸಂಕ್ಷೇಪ
ರೋಣ: ಇಂದಿನಿಂದ ನಾಟಕ ಪ್ರದರ್ಶನ
ರೋಣ: ಪಟ್ಟಣದ ಸಾಧು ಅಜ್ಜನ ಮಠದ ಮುಂಭಾಗ ಶಂಕರಗೌಡ ಜಕ್ಕನಗೌಡ್ರ ಬಯಲು ಜಾಗೆಯಲ್ಲಿ ರಾಣೆಬೆನ್ನೂರ ಮಂಜುನಾಥ ನಾಟ್ಯ ಸಂಘ, ವೃತ್ತಿ ರಂಗಭೂಮಿ ಕಲಾವಿದರಿಂದ ಮೇ 18ರಿಂದ ಸಾಮಾಜಿಕ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಮಂಜುನಾಥ ನಾಟ್ಯ ಸಂಘದ ವ್ಯವಸ್ಥಾಪಕರಾದ ಸುದರ್ಶನ ಚಿಕ್ಕಮಠ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಮೇ 18 ರಂದು ದಿ. ಎಸ್.ಎಂ. ಕಣವಿ ವಿರಚಿತ ಭೂಮಿ ತೂಕದ ಹೆಣ್ಣು ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕಗಳ ಪ್ರಾರಂಭೋತ್ಸವದ ಸಾನ್ನಿಧ್ಯವನ್ನು ಗುಲಗಂಜಿಮಠದ ಗುರಪಾದ ಶ್ರೀಗಳು ವಹಿಸುವರು. ಉದ್ಘಾಟನೆಯನ್ನು ಶಾಸಕ ಜಿ.ಎಸ್. ಪಾಟೀಲ ನೆರವೇರಿಸುವರು. ತಹಸೀಲ್ದಾರ್ ಎಂ.ಬಿ.ಪಾಟೀಲ ಜ್ಯೋತಿ ಬೆಳಗಿಸುವರು. ಅಧ್ಯಕ್ಷತೆಯನ್ನು ಪುರಸಭೆ ಮಾಜಿ ಅಧ್ಯಕ್ಷ ಹುಚ್ಚಪ್ಪ ನವಲಗುಂದ ವಹಿಸುವರು. ಅಥಿತಿಗಳಾಗಿ ಸಿಪಿಐ ಮಲ್ಲನಗೌಡ ನಾಯ್ಕರ, ಪಿಎಸ್ಐ ಎಂ.ಎನ್. ಹತ್ತಿಕಟಗಿ, ಸುಮತಿಶ್ರೀ ನವಲಿಮಠ, ಶಿವಾನಂದ ಬೂದಿಹಾಳ, ಜಗದೀಶಪ್ಪ ಹುಗ್ಗಿ, ವೀರಭದ್ರಪ್ಪ ನವಲಗುಂದ, ಬಸನಗೌಡ ಪಾಟೀಲ, ಮುತ್ತಣ್ಣ ಸಂಗಳದ, ರಾಜಣ್ಣ ಸುಂಕದ, ಶಿವಣ್ಣ ಪಲ್ಲೆದ, ಗದಿಗೆಪ್ಪ ಕಿರೇಸೂರ, ಅಶೋಕ ನವಲಗುಂದ, ಕೆಂಚಪ್ಪ ಗಡಗಿ, ಬಸವರಾಜ ಹೊಸಳ್ಳಿ, ಶಿವಣ್ಣ ನವಲಗುಂದ, ಯೂಸೂಪ ಇಟಗಿ, ನಾಗರತ್ನ ಚಿಕ್ಕಮಠ ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಎಸ್.ಎಂ. ಕೃಷ್ಣಾ ನಗರದ ಉಳಿದ ಭಾಗ, ಟರ್ನಲ್ ಪೇಟೆ, ಕಣವಿ ಪ್ಲಾಟ್, ಮಂಜುನಾಥ ನಗರ, ವಸಂತಸಿಂಗ್ ಜಮಾದಾರ ನಗರ ಈ ಭಾಗಗಳಲ್ಲಿ ಶನಿವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
ನಾಳೆ ಯುವಕ ಸಂಘ ಉದ್ಘಾಟನೆ
ಗದಗ: ನಗರದ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಕಲಾ ಮಂದಿರದಲ್ಲಿ ಹೂಗಾರ ಸಮಾಜ ಯುವಕ ಸಂಘದ ಉದ್ಘಾಟನಾ ಸಮಾರಂಭವು ಮೇ 19ರಂದು ನಡೆಯಲಿದೆ. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಅಡ್ನೂರಿನ ಪಂಚಾಕ್ಷರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಬಸವರಾಜ ಹಿಡಕಿಮಠ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಶಿವಲೀಲಾ ಅಕ್ಕಿ, ನಿಂಗಪ್ಪ ಹೂಗಾರ, ಭರತ ಹೂಗಾರ, ಅಮರೇಶ ಹಿರೇಮಠ, ಈಶಪ್ಪ ಚಳಗೇರಿ, ಹೇಮಾವತಿ ಸಾಮಂತ್ರಿ ಮುಂತಾದವರು ಭಾಗವಹಿಸುವರು. ಸಭೆಯಲ್ಲಿ ವಿವಿಧ ಗಣ್ಯರಿಗೆ ಸನ್ಮಾನ ಸಮಾರಂಭ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೌನ್ಸೆಲಿಂಗ್ ಮೂಲಕ ಆಯ್ಕೆ
ಗದಗ: 2013-14ನೇ ಸಾಲಿಗೆ ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಜಿಲ್ಲೆಯ ಎಲ್ಲ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯಗಳಲ್ಲಿ ಹಾಗೂ ಮೊರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಹಾಗೂ ಜಾತಿವಾರು, ಲಿಂಗವಾರು ಹಾಗೂ ಮೀಸಲಾತಿಗೆ ಅನುಗುಣವಾಗಿ ಜಿಲ್ಲೆಯ 8 ಮೊರಾರ್ಜಿ ದೇಸಾಯಿ ವಸತಿ, 3 ಕಿತ್ತೂರ ರಾಣಿ ಚೆನ್ನಮ್ಮ ಹಾಗೂ 1 ವಾಜಪೇಯಿ ವಸತಿ ಶಾಲೆಗಳಿಗೆ ಒಟ್ಟು 630 ವಿದ್ಯಾರ್ಥಿಗಳನ್ನು ಕೌನ್ಸ್ಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಮೇ 21ರಂದು ಬೆಳಗ್ಗೆ 8.30 ಗಂಟೆಗೆ ಮೊರಾರ್ಜಿ ದೇಸಾಯಿ ಶಾಲೆ, ಶಿವರತ್ನ ಕ್ಯಾಂಪಸ್, ನರಸಾಪುರ-ಬೆಟಗೇರಿ ಇಲ್ಲಿಗೆ ಕೌನ್ಸಲಿಂಗ್ಗೆ ಹಾಜರಾಗಲು ತಿಳಿಸಿದೆ. ಅರ್ಹ ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, 5ನೇ ತರಗತಿ ಅಂಕಪಟ್ಟಿ, ಅಂಗವಿಕಲ ಪ್ರಮಾಣ ಪತ್ರ, ವಿಶೇಷ ದುರ್ಬಲ ವರ್ಗಕ್ಕೆ (ವಿಧವಾ ಮಕ್ಕಳು, ಬಾಲ ಕಾರ್ಮಿಕ, ಅಲೆಮಾರಿ, ದೇವದಾಸಿ ಮಕ್ಕಳು) ಸೇರಿದ ಬಗ್ಗೆ ಪ್ರಮಾಣ ಪತ್ರಗಳ ಮೂಲ ಪ್ರತಿ ಹಾಗೂ ಒಂದು ಪ್ರತಿ ಝೆರಾಕ್ಸ್ ಪ್ರತಿಯನ್ನು ಕೌನ್ಸಲಿಂಗ್ ಸಮಯದಲ್ಲಿ ಸಲ್ಲಿಸಬೇಕು. ಕೌನ್ಸ್ಲಿಂಗ್ ಪತ್ರ ತಲುಪದೇ ಇದ್ದಲ್ಲಿ ಸಂಬಂಧಿಸಿದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿ ಅಥವಾ ಮೊರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಮಾಹಿತಿ ಪಡೆದುಕೊಳ್ಳಲು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.