ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಈ ಬಾರಿ ಉತ್ತಮ ಮಳೆಯಾಗುವುದೇ?

Vishwanath S
Updated On : 19 May 2013, 11:22 am

ಕನ್ನಡಪ್ರಭ ವಾರ್ತೆ, ರೋಣ, ಮೇ 18
ಸತತ ಎರಡು ವರ್ಷಗಳಿಂದ ಬರದ ಬವಣೆಯಿಂದ ತತ್ತರಿಸಿದ ತಾಲೂಕಿನ ರೈತ ಸಮೂದಾಯ ಈ ಬಾರಿಯಾದರೂ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುವ ಆಶಾಭಾವನೆಯೊಂದಿಗೆ ನೇಗಿಲು, ರಂಟೆ, ಕುಂಟೆ ಹೊಡೆದು ಹೊಲಗಳನ್ನು ಬಿತ್ತನೆಗೆ ಹದಗೊಳಿಸಿದ್ದು, ಮಳೆಗಾಗಿ ಮೋಡವನ್ನೇ ನೋಡುತ್ತಿದ್ದಾರೆ.
ಕಳೆದ ವಾರ ಅಲ್ಪ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ಮತ್ತೆ ಮಳೆಯ ನಿರೀಕ್ಷೆ ಹೊಂದಿ ತಾಲೂಕಿನ ರೈತರು ಬಿತ್ತನೆಗೆ ಬೇಕಾಗುವ ಬೀಜ, ಗೊಬ್ಬರಗಳನ್ನು ಸಾಲ ಮಾಡಿ ಖರೀದಿಸುತ್ತಿದ್ದಾರೆ.
ತಾಲೂಕಿನಲ್ಲಿ ಒಟ್ಟು 1,29,091 ಹೆಕ್ಟೇರ್ ಬೌಗೋಳಿಕ ಕ್ಷೇತ್ರವಿದ್ದು, ಅದರಲ್ಲಿ 1,20,588  ಸಾಗುವಳಿ ಕ್ಷೇತ್ರವಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 68,150 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ ತೃಣ ದಾನ್ಯ (ಏಕದಳ) ಗಳಾದ ಗೋವಿನ ಜೋಳ, ಹೈಬ್ರೀಡ್ ಜೋಳ ಮತ್ತು ಸಜ್ಜೆ ಬೆಳೆಗಳನ್ನು 16,650 ಹೆಕ್ಟೇರ್ ಪ್ರದೇಶದಲ್ಲಿ, ದ್ವಿದಳ ಧಾನ್ಯಗಳಾದ ತೊಗರಿ, ಹೆಸರು, ಉದ್ದು, ಅಲಸಂದಿ, ಅವರಿ ಬೆಳೆಗಳನ್ನು 33,250 ಹೆಕ್ಟೇರ್‌ನಲ್ಲಿ, ಎಣ್ಣೆ ಕಾಳು ಬೆಳೆಗಳಾದ ಶೇಂಗಾ, ಎಳ್ಳು, ಸೂರ್ಯಕಾಂತಿ, ಗುರೆಳ್ಳು, 17,500 ಹೆಕ್ಟೇರ್‌ನಲ್ಲಿ, ಸಂಕರಣ ಹತ್ತಿ 500 ಹೆಕ್ಟೇರ್‌ನಲ್ಲಿ, ಕಬ್ಬು 100 ಹೆಕ್ಟೇರ್‌ನಲ್ಲಿ ಮತ್ತು ಭತ್ತ 150 ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.
ಮಳೆ ಪ್ರಮಾಣ: ವಾಡಿಕೆಯಂತೆ ಒಂದು ವರ್ಷಕ್ಕೆ 6.69 ಮಿ.ಮೀ ಮಳೆಯಾಗಬೇಕಿತ್ತು. ಜನವರಿಯಿಂದ ಮೇ 31ರ ಒಳಗೆ ಸುಮಾರು 100 ಮಿ.ಮೀ ನಷ್ಟು ಮಳೆಯಾಗಬೇಕಿದ್ದು, ಅದರಲ್ಲಿ ಕೇವಲ 50.03 ಮಿ.ಮೀ ರಷ್ಟು ಮಾತ್ರ ಮಳೆಯಾಗಿದೆ. ಮೇ 1 ರಿಂದ 9 ರೊಳಗೆ 6.10 ಮಿ.ಮೀ ಮಳೆಯಾಗಿದೆ. ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಬೀಜದ ಕೊರತೆಯಿಲ್ಲ: ತಾಲೂಕಿನಲ್ಲಿನ ರೈತರಿಗೆ ಬಿತ್ತನೆಗೆ ಬೀಜದ ಕೊರತೆಯಾಗದಂತೆ ಈಗಾಗಲೇ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಇಲಾಖೆ ಹೇಳುತ್ತಿದೆ. ತಾಲೂಕಿನಲ್ಲಿ ರಾಜ್ಯ ಬೀಜ ನಿಗಮ ಸೇರಿದಂತೆ ರೋಣ, ನರೇಗಲ್, ಮತ್ತು ಹೊಳೆಆಲೂರ 3 ಕಡೆ ರೈತ ಸಂಪರ್ಕ ಕೇಂದ್ರವಿದ್ದು, ಮತ್ತು ಬೆಳವಣಕಿ, ಹಿರೇಹಾಳ ಮತ್ತು ಗಜೇಂದ್ರಗಡ ಹೀಗೆ 3 ಹೆಚ್ಚುವರಿ ರೈತ ಸಂಪರ್ಕ ಕೇಂದ್ರಗಳನ್ನು ತೆರೆಯಲಾಗಿದೆ. ಈಗಾಗಲೇ 1,245 ಕ್ವಿಂಟಲ್ ಮುಂಗಾರು ಹಂಗಾಮಿನ ಎಲ್ಲ ಬೀಜಗಳ ದಾಸ್ತಾನು ಮಾಡಲಾಗಿದೆ. ಹೆಸರು 500 ಕ್ವಿಂಟಲ್, 700 ಕ್ವಿಂಟಲ್ ಮೆಕ್ಕೆಜೋಳ, 45 ಕ್ವಿಂಟಲ್ ಶೇಂಗಾ ಬೀಜಗಳ ಸಂಗ್ರಹವಿದೆ. ಅಲ್ಲದೆ ಜಿಂಕ್, ಜಿಪ್ಸಂ, ಬೋರಾನ್ ಔಷಧಿಗಳು ಹಾಗೂ ಸಾವಯವ ಗೊಬ್ಬರಗಳಾದ ಪಿಎಸ್‌ಬಿ (ರಂಜಕ ಕರಗಿಸುವ ಅನುಜೀವಿ), ರೈಜೋಬಿಎಂ, ಸಿಟಿಕಾಂಪೋಸ್ಟ್, ವರುಮಿ ಕಾಂಪೋಸ್ಟ್, ಅಗ್ರಿಗೋಲ್ಡ್ ಗೊಬ್ಬರಗಳು ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯ್ತಿ ದರದಲ್ಲಿ ದೊರೆಯುತ್ತವೆ ಎಂದು ಕೃಷಿ ಇಲಾಖೆ ಕೃಷಿ ಅಧಿಕಾರಿ ಸಿದ್ದೇಶ ಕೊಡಳ್ಳಿ 'ಕನ್ನಡಪ್ರಭಕ್ಕೆ' ತಿಳಿಸಿದರು.                               
ಮಳೆ ನಿರೀಕ್ಷೆಯಲ್ಲಿರುವ ರೈತರು ಬಿತ್ತನೆಗೆ ಬೇಕಾದ ಬೀಜಗಳನ್ನು ಖರೀದಿಸುತ್ತಿದ್ದಾರೆ. ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಅಗತ್ಯವಿರುವ ಬೀಜ ಮತ್ತು ಗೊಬ್ಬರ ಸಂಗ್ರಹಿಸಲಾಗಿದೆ. ಮೇ ತಿಂಗಳ ಅಂತ್ಯದೊಳಗೆ ಮಳೆಯಾಗುವ ಮುನ್ಸೂಚನೆಯಿದೆ. ರೈತರಿಗೆ ಬೇಸಾಯ ಕ್ರಮದ ಬಗ್ಗೆ ಮಾಹಿತಿ ನೀಡಲು ಗ್ರಾಪಂ ಮಟ್ಟದಲ್ಲಿ ಅನುವುಗಾರರನ್ನು
ತರಬೇತಿಗೊಳಿಸಲಾಗಿದೆ.
ಎಸ್.ಎ. ಸೂಡಿಶೆಟ್ಟರ್, ರೋಣ ತಾಲೂಕು ಕೃಷಿ ಸಹಾಯಕ ನಿರ್ದೇಶಕರು
ಮಳೆಯಾಗುವುದರೊಳಗೆ ಬಿತ್ತನೆಗೆ ಬೀಜ ಮತ್ತು ಗೊಬ್ಬರದ ಕೊರತೆಯಾಗದಂತೆ ಕೃಷಿ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ವಾರಗಟ್ಟಲೆ ರೈತ ಸಂಪರ್ಕ ಕೇಂದ್ರದ ಎದುರು ಸರದಿ ಸಾಲು ನಿಲ್ಲುವಂತಾಗದೆ ಬೀಜ, ಗೊಬ್ಬರ ವಿತರಣೆಯಾಗಲಿ.
ಬಸನಗೌಡ ಪ್ಯಾಟಿಗೌಡ್ರ, ಬಸವರಾಜ ರೋಣದ,
ಉಮೇಶ ಮಲ್ಲಾಪುರ -ಹಿರೇಮಣ್ಣೂರ, ಮುಗಳಿ ರೈತರು

- ಪಿ.ಎಸ್. ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement