ಉತ್ತಮ ಫಲಿತಾಂಶ
ಗದಗ: ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಆದರ್ಶ ಶಿಕ್ಷಣ ಸಮಿತಿಯ ವಿದ್ಯಾರ್ಥಿಗಳು ಗದಗ ಜಿಲ್ಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. ವಿನುತಾ ಓಸವಾಲ್ ಶೇ 93.66 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಹಾಗೂ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪೂಜಾ ಮೇರವಾಡೆ ಶೇ. 93.50 ಅಂಕಗಳನ್ನು ಪಡೆದು ದ್ವಿತೀಯ ಹಾಗೂ ಭಾಗ್ಯಶ್ರೀ ಮಾಗುಂಡ ಶೇ 93.33 ಅಂಕಗಳನ್ನು ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು ಕಾಲೇಜಿನ ಫಲಿತಾಂಶವು ಶೇ. 78.28 ರಷ್ಟಾಗಿದ್ದು, ಪರೀಕ್ಷೆಗೆ ಹಾಜರಾದ 175 ವಿದ್ಯಾರ್ಥಿಗಳಲ್ಲಿ 137 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರಶಸ್ತಿ ಸಹಿತ 16 ವಿದ್ಯಾರ್ಥಿಗಳು, ಪ್ರಥಮ ವರ್ಗದಲ್ಲಿ 86 ವಿದ್ಯಾರ್ಥಿಗಳು, ದ್ವಿತೀಯ ವರ್ಗದಲ್ಲಿ 20 ವಿದ್ಯಾರ್ಥಿಗಳು ಹಾಗೂ 15 ವಿದ್ಯಾರ್ಥಿಗಳು ತೃತೀಯ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲಿನಿ ಬನ್ಸಾಲಿ ಮತ್ತು ನಿತಿನ್ ಅಗರವಾಲ್ ಇವರು ವಾಣಿಜ್ಯ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಆದರ್ಶ ಶಿಕ್ಷಣ ಸಮಿತಿಯ ಅಧ್ಯಕ್ಷ ವಿ.ಆರ್. ಕುಷ್ಟಗಿ, ಕಾರ್ಯದರ್ಶಿ ಪಿ.ಆರ್. ಅಡವಿ, ಪ್ರಾಚಾರ್ಯ ವಿ.ಕೆ. ಸೊರಟೂರ, ಡಾ. ಎಂ.ಎಲ್. ಗುಳೇದಗುಡ್ಡ ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.