ಕೈಗಾರಿಕೆ ಸ್ಥಾಪನೆಯಿಂದ ನಗರಾಭಿವೃದ್ಧಿ: ಶಿರೂರ
ಕನ್ನಡಪ್ರಭ ವಾರ್ತೆ, ಗದಗ, ಮೇ 18
ದೇಶದಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳು ಬೆಳೆಯಬೇಕು ಎಂಬ ಉದ್ದೇಶದಿಂದ ಭಾರತ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಕೈಗಾರಿಕೆಗಳ ಸ್ಥಾಪನೆಯಿಂದ ನಗರದ ಅಭಿವೃದ್ಧಿ ಸಾಧ್ಯ ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಶಿರೂರ ಹೇಳಿದರು.
ಈಚೆಗೆ ಅವರು ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ ಬೆಂಗಳೂರ ಇವರ ಆಶ್ರಯದಲ್ಲಿ ಗುಂಪು ಕೈಗಾರಿಕೆಗಳ ಅಭಿವೃದ್ಧಿ ಯೋಜನೆಯ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಜಾಗತಿಕ ಮಾರುಕಟ್ಟೆಯಲ್ಲಿ ಅವಕಾಶಗಳನ್ನು ಬಾಚಿಕೊಳ್ಳಲು ಉತ್ಪಾದಕರು ಮುಂಚೂಣಿಯಲ್ಲಿರುವುದು ಅವಶ್ಯಕ. ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಉತ್ಪಾದಿಸುವ ವಸ್ತುಗಳು ದಿನನಿತ್ಯದ ಬೆಲೆಯಲ್ಲಿ ಅಂತರ್ ರಾಷ್ಟ್ರೀಯ ಗುಣಮಟ್ಟದಲ್ಲಿ ತೀವ್ರ ಪೈಪೋಟಿ ಎದುರಿಸಬೇಕಾಗಿದೆ. ಬಹುರಾಷ್ಟ್ರೀಯ ಕಂಪನಿಗಳು ಉತ್ಪನ್ನ, ಆಕಾರ, ಬೆಲೆ ಮತ್ತು ಗುಣಮಟ್ಟದಲ್ಲಿ ಆಧುನಿಕತೆಯನ್ನು ರೂಢಿಸಿಕೊಂಡು ಹಳ್ಳಿ ಹಳ್ಳಿಗೂ ಕಾಲಿಟ್ಟಿರುವುದರಿಂದ ಸಣ್ಣ ಪ್ರಮಾಣದಲ್ಲಿ ಅದರಲ್ಲೂ ಗ್ರಾಮೀಣ ಕೈಗಾರಿಕೆಗಳ ಅಸ್ಥಿತ್ವಕ್ಕಾಗಿ ಇಂದು ಹೋರಾಟ ಮಾಡುವಂತಾಗಿದೆ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಸಾಕಷ್ಟು ಕೈಗಾರಿಕೆಗಳು ಮುಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ಭಾರತ ಸರ್ಕಾರವು ರೂಪಿಸಿದ ಈ ಯೋಜನೆಯನ್ನು ಉದ್ಯಮದಾರರು ಸದುಪಯೋಗ ಪಡೆದುಕೊಂಡು ನಗರದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಿ ಉನ್ನತ ಮಟ್ಟದಲ್ಲಿ ಬೆಳೆಯಲೆಂದು ಆಶಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಮುನಿಯಪ್ಪ ಮಾತನಾಡಿ, ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ ಯೋಜನೆಯು ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಭಾರತ ಸರ್ಕಾರದ ಯೋಜನೆಯಾಗಿದ್ದು, 25 ಜನರು ಒಟ್ಟುಗೂಡಿ ಕೈಗಾರಿಕೆಗಳನ್ನು ನಡೆಸಲು ಅವಕಾಶವಿರುತ್ತದೆ ಎಂದರು. ನಗರಸಭೆಯ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ ಮಾತನಾಡಿ, ಹೊಸ ಉದ್ಯಮಗಳಿಗೆ ತಾವು ಸಹಾಯ ಸಹಕಾರ ನೀಡಬೇಕು. ಈಗಾಗಲೇ ನಾವು ಉದ್ಯಮವನ್ನು ಸ್ಥಾಪಿಸಲು ಎಲ್ಲ ಮೂಲಭೂತ ಸೌಕರ್ಯವನ್ನು ಹೊಂದಿದ್ದು, ಕ್ಲಸ್ಟರ್ ಅಡಿಯಲ್ಲಿ ಉದ್ಯಮವನ್ನು ಬೆಳೆಸಲು ನಾವು ಸಿದ್ಧರಿದ್ದೇವೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಐ. ಕುಂಬಾರ ಮಾತನಾಡಿದರು. ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿ ಎಂ.ಬಿ. ಸುರಕೋಡ ಸೇರಿದಂತೆ ಜಿಲ್ಲೆಯ ಕೈಗಾರಿಕೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಹಾಯಕ ನಿರ್ದೇಶಕರಾದ ಸಿ.ಪಿ. ಮಾಡಳ್ಳಿ ನಿರೂಪಿಸಿದರು. ಎಂ.ಜಿ. ಸುರೇಶಚಂದ್ರ ವಂದಿಸಿದರು.