ಶಿರಹಟ್ಟಿಯಲ್ಲಿ ಸಂಭ್ರಮಾಚರಣೆ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮೇ 18
ಕಾಂಗ್ರೆಸ್‌ನ ಹಿರಿಯ ನಾಯಕ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಮುಖಂಡ ವೈ.ಎಸ್.ಪಾಟೀಲ ನೇತೃತ್ವದಲ್ಲಿ ಶನಿವಾರ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು.
ಪಪಂ ಸದಸ್ಯ ಎಚ್.ಡಿ. ಮಾಗಡಿ, ಸಂತೋಷ ಕುರಿ, ಮಂಜುನಾಥ ಘಂಟಿ ಮಾತನಾಡಿ, ರಾಜಕೀಯ ಜೀವನದುದ್ದಕ್ಕೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಫಲವಾಗಿ ಅವರಿಗೆ ಸಚಿವ ಸ್ಥಾನ ದೊರೆತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಮತಕ್ಷೇತ್ರಗಳ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ತೀವ್ರ ತೊಂದರೆ ಇದ್ದು, ಜನತೆಗೆ ಅತಿ ಶೀಘ್ರದಲ್ಲಿಯೇ ಎಲ್ಲ ರೀತಿಯ ಮೂಲ ಸೌಲಭ್ಯ ಕಲ್ಪಿಸಲು ಶ್ರಮಿಸುತ್ತಾರೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಘಂಟೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಅಂಬೇಡ್ಕರ್ ನಿಗಮ, ದೇವರಾಜ ಅರಸು ನಿಗಮದಲ್ಲಿ ಮಾಡಿದ ಎಲ್ಲ ರೀತಿಯ ಸಾಲವನ್ನು ಮನ್ನಾ ಮಾಡಿ, ರಾಜ್ಯದ ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಬಗೆಗಿನ ಕಾಳಜಿಯನ್ನು ತೋರಿಸಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಣುತ್ತಿರುವ ಎಲ್ಲ ರೀತಿಯ ಸಮಸ್ಯೆಗಳಿಗೆ ಹಾಗೂ ಬಡ ಜನರ ಏಳ್ಗೆಗಾಗಿ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕವಾಗಿ ಶ್ರಮಿಸಲಿದೆ ಎಂದರು. ಬುಡನಶ್ಯಾ ಮಕಾನದಾರ, ಪರಮೇಶಿ ಪರಬ, ದೇವಪ್ಪ ಬಟ್ಟೂರ, ಪರಸಪ್ಪ ಹುಲಕಡ್ಡಿ, ಸಿಕಂದರ ಟಪಾಲ, ಅಶೋಕ ಮಡಿವಾಳರ, ಮಹೇಶ ಕಲ್ಲಪ್ಪನವರ, ಯಲ್ಲಪ್ಪ ಹಾಲಪ್ಪನವರ, ರಫೀಕ ಹೆಗಡೆ, ಹನಮಂತ ಕುಳಗೇರಿ, ಶಿವಪ್ಪ ಕರಿಗಾರ ಮಹಾಂತೇಶ ದಶಮನಿ, ರಾಜು ನೂರಶೆಟ್ಟರ, ರಫೀಕ ಆದ್ರಳ್ಳಿ, ರಾಜು ಸ್ವಾಮಿ, ಶಿದ್ದು ಕಂಬಳಿ ಮತ್ತಿತರರು ಉಪಸ್ಥಿತರಿದ್ದರು.