ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಚರಂಡಿ ನೀರು ರಸ್ತೆ ಪಾಲು

Lingaraj Badiger
Updated On : 20 May 2013, 11:21 am

ಗಜೇಂದ್ರಗಡ: ಸ್ಥಳೀಯ ಕೆನರಾ ಬ್ಯಾಂಕ್ ಬಳಿ ಚರಂಡಿ ತುಂಬಿ ಗಲೀಜು ನೀರು ರಸ್ತೆ ಮೇಲೆಲ್ಲ ಹರಿದ ಪರಿಣಾಮ ಮುಖ್ಯ ವಾಣಿಜ್ಯ ಮಾರುಕಟ್ಟೆ ಬೀದಿ ಗಬ್ಬೆದ್ದು ನಾರುತ್ತಿದೆ. ಹಲವಾರು ತಿಂಗಳಿಂದ ಸೃಷ್ಟಿಯಾಗಿರುವ ಈ ಅವ್ಯವಸ್ಥೆ ಸರಿಪಡಿಸಲು ಯಾರೂ ಕ್ರಮ ಕೈಗೊಳ್ಳುತ್ತಿಲ್ಲ.
ಮುಖ್ಯ ವಾಣಿಜ್ಯ ಮಾರುಕಟ್ಟೆ ಬೀದಿಯಲ್ಲಿ ಚರಂಡಿ ತುಂಬಿ ಹರಿದಾಗ ಸುತ್ತಲಿನ ಅಂಗಡಿ ಮಾಲೀಕರು ಪುರಸಭೆಗೆ ದೂರು ನೀಡಿದ ಬಳಿಕ ಕಾಟಾಚಾರಕ್ಕೆ ಸ್ವಚ್ಛ ಮಾಡಿ ತೆರಳುತ್ತಾರೆ. ಮತ್ತೆ ಯಥಾಸ್ಥಿತಿ ನಿರ್ಮಾಣವಾಗುತ್ತದೆ. ಮುಖ್ಯ ವಾಣಿಜ್ಯ ಮಾರುಕಟ್ಟೆ ಬೀದಿ ಗಬ್ಬೆದ್ದು ನಾರುತ್ತಿರುವುದರಿಂದ ಜನತೆ, ವಾಹನಗಳು ಕೊಳಚೆಯಲ್ಲಿಯೇ ಸಂಚರಿಸುವಂತಾಗಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡಲು ಅಧಿಕಾರಿಗಳು ಮುಂದಾಗದೆ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ನವನಗರದಲ್ಲಿರುವ ನೂರಾರು ಮನೆಗಳಿಂದ ಹರಿದು ಬರುವ ಚರಂಡಿ ಕೊಳಚೆ ಮಾರುಕಟ್ಟೆಯ ಭೂಮರೆಡ್ಡಿ ಕಾಂಪ್ಲೆಕ್ಸ್ ಕೆಳಗಿರುವ ಅಂಗಡಿ ಮುಂದಿನ ರಸ್ತೆ ಮೇಲೆ ಜನ, ವಾಹನಗಳು ಕೊಳಚೆಯಲ್ಲಿಯೇ ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದೆ. ಈ ಸ್ಥಳವು ಗಲೀಜಿನಿಂದ ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದೆ. ಸಾರ್ವಜನಿಕರಿಗೆ, ವರ್ತಕರಿಗೆ ಅನಾರೋಗ್ಯಕ್ಕೆ ಕಾರಣವಾಗುವ ಪರಿಸ್ಥಿತಿ ಇದ್ದು, ಶೀಘ್ರ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಸರ್ಕಾರ ಪಟ್ಟಣದ ಅಭಿವೃದ್ಧಿ, ಶುಚಿತ್ವ ಕಾಪಾಡಲು ಹಾಗೂ ನಾಗರಿಕರ ಆರೋಗ್ಯ ರಕ್ಷಣೆ, ನೈರ್ಮಲ್ಯಕ್ಕಾಗಿ ಕೋಟ್ಯಂತರ ಹಣ ವೆಚ್ಚ ಮಾಡುತ್ತಿದೆ. ಆದರೆ, ಅಂಥಹ ಯೋಜನೆಗಳು ಸಮರ್ಪಕವಾಗಿ ನಡೆಯುವುದಿಲ್ಲ ಎನ್ನುವುದಕ್ಕೆ ಈ ಚಿತ್ರಣ ಸಾಕ್ಷಿಯಾಗಿದೆ. ಈಚೆಗೆ ಸಿಸಿ ರಸ್ತೆಯನ್ನು ಮಾಡಲಾಗಿದ್ದರೂ ರಸ್ತೆಯ ಬದಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಗಲೀಜು ನೀರು ರಸ್ತೆಗೆ ನುಗ್ಗಿ ದುರ್ನಾತ ಹರಡುತ್ತಿದೆ. ಇಷ್ಟಾದರೂ ಪುರಸಭೆ ಆಡಳಿತ ಸ್ವಚ್ಛತೆಗೆ ಆದ್ಯತೆ ನೀಡದೆ ತೆಪ್ಪಗೆ ಕುಳಿತಿದೆ. ರಸ್ತೆಯಲ್ಲ ಕೆಸರುಮಯವಾಗಿದ್ದರಿಂದ ಸಂಚಾರಕ್ಕೂ ಸಂಚಕಾರವನ್ನುಂಟು ಮಾಡಿದೆ. ರಸ್ತೆಯ ಮಧ್ಯೆ ಎಲ್ಲೆಂದರಲ್ಲಿ ಕೆಸರು ತುಂಬಿದ ನೀರು ನಿಂತಿದ್ದರಿಂದ ಸೊಳ್ಳೆಗಳು ವ್ಯಾಪಕವಾಗಿ ಹರಡಿವೆ. ಮುಖ್ಯಬೀದಿ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೇ ಜನವಸತಿ ಪ್ರದೇಶದಲ್ಲಿ ಕಲ್ಮಷಗೊಂಡ ಚರಂಡಿ ನೀರು ನಿಲ್ಲುವುದರಿಂದ ಸಾಂಕ್ರಾಮಿಕ ಕಾಯಿಲೆಗಳ ಬೀತಿಯಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಇನ್ನಾದರೂ ಇಲ್ಲಿರುವ ಮಲೀನ ನೀರು ಸುಗಮವಾಗಿ ಸಾಗಲು ಸೂಕ್ತ ಗಟಾರು ನಿರ್ಮಿಸಬೇಕಾಗಿದೆ. ಜನತೆಗೆ ಮೇಲಿಂದ ಮೇಲೆ ಅನಾರೋಗ್ಯದ ಭೀತಿಯೂ ಕಾಡಲಾರಂಭಿಸಿದೆ. ಅಂಗಡಿ ಮುಂದೆ ನಿಲ್ಲುವ ಕಲ್ಮಷ ನೀರಿನಿಂದ ರೋಗಾಣುಗಳು ವ್ಯಾಪಾಕವಾಗಿ ಹರಡಿ ಸಾಂಕ್ರಾಮಿಕ ರೋಗಗಳಾದ ಚಿಕೂನ್‌ಗುನ್ಯಾ, ಡೆಂಘೀ ಮುಂತಾದ ಕಾಯಿಲೆಗಳು ಹರಡುವ ಸಂಭವವಿದ್ದು, ಕೂಡಲೇ ಸೂಕ್ತ ಕ್ರಮ  ಕೈಗೊಳ್ಳಬೇಕೆಂದು ಜನ ಒತ್ತಾಯಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement