ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಿ: ಪಾಟೀಲ

Lingaraj Badiger
Updated On : 20 May 2013, 11:21 am

ಕನ್ನಡಪ್ರಭ ವಾರ್ತೆ, ರೋಣ, ಮೇ 19
ಜೀವನವನ್ನೇ ಕಲೆಗಾಗಿ ಮುಡುಪಾಗಿಟ್ಟು, ತಮ್ಮಲ್ಲಿನ ನೋವನ್ನು ತೋರ್ಪಡಿಸದೇ ಕಲಾ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಹಗಲಿರುಳು ಶ್ರಮಿಸುತ್ತಿರುವ ವೃತ್ತಿ ರಂಗಭೂಮಿ ಕಲಾವಿದರನ್ನು ಗೌರವಿಸಿ, ಪ್ರೋತ್ಸಾಹಿಸಬೇಕು ಎಂದು ಹಾವೇರಿ ಲೋಕಸಭಾ ಕಾಂಗ್ರೆಸ್ ಯುವ ಉಪಾಧ್ಯಕ್ಷ ಮಿಥುನ್ ಪಾಟೀಲ ಹೇಳಿದರು.
ಅವರು ಶನಿವಾರ ರಾತ್ರಿ ಪಟ್ಟಣದ ಸಾದು ಅಜ್ಜನ ಮಠದ ಎದುರಿನ ಬಯಲು ಜಾಗೆಯಲ್ಲಿ ರಾಣಿಬೆನ್ನೂರು ಮಂಜುನಾಥ ನಾಟ್ಯ ಸಂಘ ಇವುಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭೂಮಿ ತೂಕದ ಹೆಣ್ಣು ಎಂಬ ಸಾಮಾಜಿಕ ನಾಟಕ ಪ್ರಾರಂಭೋತ್ಸವನ್ನು ಉದ್ಘಾಟಿಸಿ ಮಾತನಾಡಿರು.
ಜೀವನದಲ್ಲಿನ ನೈಜ ಸನ್ನಿವೇಶಗಳನ್ನು ಅನಾವರಣಗೊಳಿಸಿ, ಉತ್ತಮ ಸಂದೇಶ ನೀಡುವುದರೊಂದಿಗೆ ಸಮಾಜವನ್ನು ಪರಿವರ್ತನೆಗೊಳಿಸುವ ಸಾಮರ್ಥ್ಯ ನಾಟಕ ಕಲೆಯಲ್ಲಿ ಅಡಗಿದೆ. ನಾಟಕಗಳಲ್ಲಿ ಬರುವ ಪ್ರತಿಯೊಂದು ಸನ್ನಿವೇಶಗಳು ಮನಸ್ಸಿಗೆ ಮುದ ನೀಡುವುದಲ್ಲದೆ, ಪ್ರೇಕ್ಷಕರನ್ನು ಆಕರ್ಷಿಸುತ್ತವೆ. ಪ್ರಸ್ತುತ ದಿನದಲ್ಲಿ ಕಲಾವಿದರಿಗೆ ಸರಿಯಾದ ಪ್ರೋತ್ಸಾಹವಿಲ್ಲದಾಗಿದೆ. ಸರ್ಕಾರ ಹವ್ಯಾಸಿ ಮತ್ತು ವೃತ್ತಿ ರಂಗಭೂಮಿ ಕಲಾವಿದರನ್ನು ಗುರುತಿಸಿ ಗೌರವಿಸುವ ಮೂಲಕ ಸೂಕ್ತ ಸ್ಥಾನಮಾನ ನೀಡಬೇಕಾಗಿದೆ. ಉತ್ತರ ಕರ್ನಾಟಕವು ವೃತ್ತಿ ರಂಗಭೂಮಿಗೆ ತನ್ನದೆಯಾದ ಕೊಡುಗೆ ನೀಡಿದೆ. ಒಂದು ಕಾಲದಲ್ಲಿ ವೃತ್ತಿ ರಂಗಭೂಮಿ ನಾಟಕಗಳಿಗೆ ಹೆಸರುವಾಸಿಯಾಗಿತ್ತು. ಕಾಲಕ್ರಮೇಣ ಸರಿಯಾದ ಪಾಲನೆ, ಪೋಷಣೆ ಇಲ್ಲದೆ ಚಟುವಟಿಕೆ ಕುಂಠಿತಗೊಂಡವು. ಚಿತ್ರನಟ ಸುಧೀರ, ಮಾಲತಿ ಸುಧೀರ, ಸುಮತಿಶ್ರೀ, ಎನ್.ಬಸವರಾಜ, ಏಣಗಿ ಬಾಳಪ್ಪ ಮುಂತಾದವರನ್ನು ಉನ್ನತ ಸ್ಥಾನಕ್ಕೆರಿಸುವಲ್ಲಿ ರಂಗಭೂಮಿ ತನ್ನದೆಯಾದ ಕೊಡುಗೆ ನೀಡಿದೆ. ನಮ್ಮಲ್ಲಿ ಇನ್ನೂ ಇಂತಹ ಅನೇಕ ಕಲಾವಿದರಿದ್ದಾರೆ. ಅವರನ್ನು ಗುರುತಿಸಿ, ಸಹಕಾರ ನೀಡುವ ಕಾರ್ಯವಾಗಬೇಕು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಗುರುಪಾದ ಶ್ರೀಗಳು ಹಾಗೂ ಮಹೆಬೂಬ ಮೋತೆಖಾನ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಂಜುನಾಥ ನಾಟ್ಯ ಸಂಘಕ್ಕೆ ಸಹಾಯ, ಸಹಕಾರ ನೀಡಿದ ರಂಗಭೂಮಿ ಕಲಾವಿದೆ, ನಾಟಕ ಅಕಾಡೆಮಿ ಸದಸ್ಯೆ ಸುಮತಿಶ್ರೀ ನವಲಿಹಿರೇಮಠರನ್ನು ಸಂಘದ ಮಾಲಿಕ, ವ್ಯವಸ್ಥಾಪಕರು ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಿದರು.
ಶಿವು ಹುಲ್ಲೂರ, ಮುಖಪ್ಪ ಕಿರೇಸೂರ, ಮಲ್ಲು ಪೂಜಾರ, ವಿಶ್ವನಾಥ ಜಿಡ್ಡಿಬಾಗಿಲ, ಆನಂದ ಚಂಗಳಿ, ಬಸನಗೌಡ ಪಾಟೀಲ, ಅಚ್ಚಪ್ಪ ಅಚ್ಚನಗೌಡ್ರ, ಲೋಕಪ್ಪ ನವಲಗುಂದ, ಬಸವರಾಜ ಕೊಳ್ಳಿ, ಶಿವಾನಂದ ಬೂದಿಹಾಳ, ಸುದರ್ಶನ ಚಿಕ್ಕಮಠ, ಉಮೇಶ ಕಿರೇಸೂರ ಮುಂತಾದವರು ಇದ್ದರು. ಜಗದೀಶ ಭಜಂತ್ರಿ ನಿರೂಪಿಸಿದರು. ನಾಗರತ್ನ ಚಿಕ್ಕಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement