ರಂಗು ಕಳೆದುಕೊಂಡ ರಂಗಮಂದಿರ
ವಾರ್ತೆ, ರೋಣ, ಮೇ 19
ತಾಲೂಕಿನ ಕೇಂದ್ರ ಸ್ಥಾನವಾದ ರೋಣ ಪಟ್ಟಣದ ಹೊಸ ಸಂತೆ ಮಾರುಕಟ್ಟೆಯ ಹಿಂಭಾಗದ ಜಾಗೆಯಲ್ಲಿ ನಿರ್ಮಿಸಲಾದ ರಂಗ ಮಂದಿರ ಪುರಸಭೆಯ ನಿರ್ಲಕ್ಷ್ಯದಿಂದ ಮೂಲಭೂತ ಸೌಲಭ್ಯವಿಲ್ಲದೆ ಕಸ, ಕಂಟಿಗಳ, ಹಂದಿಗಳ ತಾಣವಾಗಿ ನೋಡುಗರಿಗೆ ಅಸಹ್ಯ ಮೂಡಿಸುವಂತಿದೆ.
ಉತ್ತರ ಕರ್ನಾಟಕದ ಗಂಡು ಮೆಟ್ಟಿನ ನೆಲ ರೋಣ ತಾಲೂಕು. ಅನೇಕ ಕವಿ ಪುಂಗವರು, ಕಲಾವಿದ, ಹಿಂದೂಸ್ಥಾನಿ ಸಂಗೀತ ದಿಗ್ಗಜರು, ವಿದ್ವಾಂಸ, ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರರನ್ನು ನಾಡಿಗೆ ಕೊಡುಗೆ ನೀಡಿದೆ.
2003ರಲ್ಲಿ ನಿರ್ಮಾಣ: ತಾಲೂಕಿನ ಕೇಂದ್ರ ಸ್ಥಾನವಾದ ರೋಣ ಪಟ್ಟಣದಲ್ಲಿನ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ವೇದಿಕೆ ಅವಶ್ಯವಿರುವುದರಿಂದ 2003ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರು. 1 ಲಕ್ಷ ಅನುದಾನದಡಿ 12್ಢ40 ಅಳತೆಯ ರಂಗ ಮಂದಿರ ನಿರ್ಮಿಸಿ ಪುರಸಭೆಗೆ ಹಸ್ತಾಂತರಿಸಲಾಯಿತು.
ಆದರೆ, ಪುರಸಭೆ ಅಧಿಕಾರಿಗಳು ಅದಕ್ಕೆ ಮೂಲ ಸೌಕರ್ಯ ದೊರಕಿಸುವಲ್ಲಿ ವಿಫಲವಾಗಿದ್ದರಿಂದ ಅದು ಪಾಳು ಬಿದ್ದಿದ್ದು, ನೂರಾರು ಕಲಾವಿದರಿಗೆ ನೋವುಂಟು ಮಾಡಿದೆ.
ವೇದಿಕೆ ಅಗತ್ಯ: ಪಟ್ಟಣ ಸೇರಿದಂತೆ ತಾಲೂಕಾದ್ಯಂತ ಸಾಕಷ್ಟು ಪ್ರತಿಭಾನ್ವಿತ ಕಲಾವಿದರಿದ್ದಾರೆ. ಅವರ ಪ್ರತಿಭೆ ಅನಾವರಣಕ್ಕೆ ರಂಗಮಂದಿರ, ವೇದಿಕೆ, ಸಭಾಭವನಗಳು ಅವಶ್ಯ. ಆದರೆ, ಇಂದು ರಂಗಮಂದಿರದ ಅವ್ಯಯವಸ್ಥೆಯಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಗಳು ಜರುಗದೇ ರಂಗಮಂದಿರ ದುಸ್ಥಿತಿ ಅನುಭವಿಸುತ್ತಿದೆ.
ಪೂರ್ಣಗೊಳ್ಳದ ರಂಗಮಂದಿರ: 10 ವರ್ಷಗಳ ಹಿಂದೆಯೇ ನಿರ್ಮಾಣ ಕಾರ್ಯ ಕೈಗೊಂಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ರಂಗಮಂದಿರಕ್ಕೆ ಮೇಲ್ಛಾವಣೆ ಹಾಕದೇ ಪುರಸಭೆಗೆ ಹಸ್ತಾಂತರಿಸಿದರು. ಅಪೂರ್ಣಗೊಂಡ ರಂಗಮಂದಿರವನ್ನು ಪೂರ್ಣಗೊಳಿಸುವ ಗೋಜಿಗೆ ಪುರಸಭೆಯವರು ಹೋಗಲಿಲ್ಲ. ಸಂಪೂರ್ಣ ನಿರ್ಲಕ್ಷ್ಯಕ್ಕೊಳಪಟ್ಟಿದ್ದರಿಂದ ನೆಲಹಾಸಿಗೆಯ ಸುಮಾರು 40ಕ್ಕೂ ಹೆಚ್ಚು ಪಾಟೀಕಲ್ಲುಗಳನ್ನು ಕಿತ್ತುಕೊಂಡು ಹೋಗಿರುವುದು ದುರದೃಷ್ಟಕರ ಸಂಗತಿ. ರಂಗಮಂದಿರವು ಕೇವಲ ಹಿಂಭಾಗದಲ್ಲಿ ಒಂದು ಗೋಡೆ, 4 ಕಂಬ, 2 ಅಡ್ಡ ಬೀಮ್‌ಗಳನ್ನು ಬಿಟ್ಟರೆ ಛಾವಣಿಯಾಗಲಿ, ಅದಕ್ಕೆ ಮೂಲ ಸೌಕರ್ಯ ಒದಗಿಸುವತ್ತ ಗಮನಹರಿಸಿಲ್ಲ ಎನ್ನುವುದು ಕಲಾವಿದರ ನೋವು.
ತಾಲೂಕಿನ ಕಲಾ ದಿಗ್ಗಜರು: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕಲೆಗಾಗಿಯೇ ಜೀವನ ಮುಡುಪಾಗಿಟ್ಟು ಹೋರಾಡಿದ ಕಲಾ ದಿಗ್ಗಜರಾದ ರೋಣ ಪಟ್ಟಣದಲ್ಲಿ ಜನಿಸಿದ ಪಂಡಿತ ಡಾ ಭೀಮಸೇನ ಜೋಶಿ, ಅರಹುಣಸಿಯ ಶಹನಾಯಿ ಹಾಗೂ ಕ್ಲಾರನೇಟ್ ಮಾಂತ್ರಿಕ ಭೀಮಪ್ಪ ಭಜಂತ್ರಿ, ಕೋಳಲು ವಾದಕ ಮರಿಯಪ್ಪಜ್ಜ ಭಜಂತ್ರಿ, ರಂಗಭೂಮಿ ಕಲಾವಿದ ಮುದೇನಗುಡಿಯ ಬಸವಯ್ಯ ಅಂಗಡಿ, ಕೊತಬಾಳದ ಮರಿಚೆಪ್ಪ ಹಳ್ಳನ್ನವರ, ಮುತ್ತಣ್ಣ ಯಾಳಗಿ, ವೆಂಕನಗೌಡ ಪಾಟೀಲ, ಬಸಪ್ಪ ಮಾದರ, ಜಾನಪದ ಕಲಾವಿದ ಶಂಕ್ರಪ್ಪ ಸಂಕಣ್ಣವರ, ನಿಂಗಪ್ಪ ನಿಡಗುಂದಿ, ಪಂ. ಬಾಲಚಂದ್ರ ಶಾಸ್ತ್ರಿ, ಹಾಸ್ಯ ಕಲಾವಿದ ಬಸವರಾಜ ಪಾಗದ, ಅರುಣ ಶಿಂಗ್ರಿ, ಶರೀಫ ಹೊಸಮನಿ, ಮಹೇಶ ಅಚ್ಚಿನಗೌಡ್ರ ಹೀಗೆ ಕಲಾವಿದರ ದೊಡ್ಡ ಪಟ್ಟಿಯೇ ಇದೆ. ದಿಗ್ಗಜರು ಜನ್ಮ ತಾಳಿದ ಪುಣ್ಯ ನೆಲದಲ್ಲಿ ಕಲಾವಿದರ ರಂಗಮಂದಿರ ಅಧೋಗತಿಗೆ ಹೋಗಿರುವುದು ದುರಂತ.
ರಂಗಮಂದಿರ ಸುತ್ತ ಜಾಲಿಕಂಟಿಗಳು ಬೆಳೆದಿದ್ದು, ಮಲ, ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಗಬ್ಬೆದ್ದು ನಾರುತ್ತಿದೆ. ಕಲೆಯ ಜೀವಾಳವಾಗಬೇಕಿದ್ದ ರಂಗಮಂದಿರ ಹಂದಿ ಸಾಕುವ, ದನಕರುಗಳ ಕಟ್ಟುವ ಜಾಗ ಹಾಗೂ ಸಾರ್ವಜನಿಕರ ಶೌಚಾಲಯವಾಗಿ ಮಾರ್ಪಟ್ಟಿರುವುದು ನೋವುಂಟು ಮಾಡಿದೆ.
-ವೀರೇಶ ದೊಡ್ಡಣ್ಣವರ, ಅರ್ಜುನ ಕೊಪ್ಪಳ
ರೋಣ ಪಟ್ಟಣ ನಿವಾಸಿಗಳು
ಕಲಾವಿದರು ಪ್ರತಿಭೆ ಅನಾವರಣ ಮಾಡಲು ತಾಲೂಕಿನ ಕೇಂದ್ರ ಸ್ಥಾನವಾದ ರೋಣ ಪಟ್ಟಣದಲ್ಲಿ ಸೂಕ್ತ ವೇದಿಕೆ ಅಗತ್ಯವಿದೆ. ಕಾಟಾಚಾರಕ್ಕೆ ರಂಗಮಂದಿರ ನಿರ್ಮಿಸಿ ಕಲಾವಿದರಿಗೆ ನೋವುಂಟು ಮಾಡದೇ ಇರುವ ರಂಗಮಂದಿರಕ್ಕೆ ಅಗತ್ಯ ಸೌಕರ್ಯ ಕಲ್ಪಿಸಿ ಕೊಡುವಲ್ಲಿ ಸ್ಥಳೀಯ ಪುರಸಭೆ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕು.
-ಶಂಕ್ರಣ್ಣ ಸಂಕಣ್ಣವರ
ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ
ರೋಣದಲ್ಲಿ ರಂಗ ಮಂದಿರ ಎಲ್ಲಿ ಇದೆ ಎಂಬುದು ನನಗೆ ಗೊತ್ತಿಲ್ಲ. ಈವರೆಗೂ ಅದನ್ನು ನಾನು ನೋಡಿಯೇ ಇಲ್ಲ. ಪುರಸಭೆ ಯೋಜನಾಧಿಕಾರಿಯನ್ನು ಕೇಳಿ ಹೇಳುತ್ತೇನೆ. ಒಂದು ವೇಳೆ ಸೌಲಭ್ಯಗಳ ಕೊರತೆ ಇದ್ದಲ್ಲಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
-ವಿ. ರಾಮಸ್ವಾಮಿ
ರೋಣ ಪುರಸಭೆ ಮುಖ್ಯಾಧಿಕಾರಿ
- ಪಿ.ಎಸ್. ಪಾಟೀಲ