ಇಂದು ಕಾಂಗ್ರೆಸ್ ಸಭೆ
ಗದಗ: ಮೇ 21ರಂದು ಸಂಜೆ 4 ಗಂಟೆಗೆ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿಯ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಚ್.ಕೆ. ಪಾಟೀಲ ಮೇ 22ರಂದು ಗದುಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಅದ್ದೂರಿ ಸ್ವಾಗತ ಕೋರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪೂರ್ವಭಾವಿ ಸಭೆ ಕರೆಯಲಾಗಿದೆ. ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕಾಂಗ್ರೆಸ್ ಪಕ್ಷದ ಎಲ್ಲ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಪಕ್ಷದ ಹಾಲಿ ಹಾಗೂ ಮಾಜಿ ಜಿಪಂ, ತಾಪಂ, ಗ್ರಾಪಂ, ನಗರಸಭೆ, ಪುರಸಭೆ, ಪಪಂ ಅಧ್ಯಕ್ಷರು, ಸದಸ್ಯರು, ರಾಜೀವಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ, ತಾಲೂಕು, ಪಂಚಾಯತ್, ಗ್ರಾಮ ಘಟಕಗಳ ಪದಾಧಿಕಾರಿಗಳು, ಸದಸ್ಯರು, ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಕಾಂಗ್ರೆಸ್ ಸದಸ್ಯರು ಈ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಸಲಹೆ-ಸೂಚನೆ ನೀಡಬೇಕೆಂದು ಗುರಣ್ಣ ಬಳಗಾನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಕಸ್ಮಿಕ ಬೆಂಕಿ: ಹಾನಿ
ಗದಗ: ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಹಳೆ ಬಸ್ ನಿಲ್ದಾಣದ ಸಮೀಪದ ಮೌನೇಶ್ವರ ಮಠದ ಬಳಿ ಮನೆ ಹಾಗೂ ಪಕ್ಕದಲ್ಲಿ ಬಣವೆಗೆ ಬೆಂಕಿ ತಗಲಿ ಅಪಾರ ಹಾನಿ ಸಂಭವಿಸಿದ ಘಟನೆ ಸೋಮವಾರ ಸಂಜೆ ಜರುಗಿದೆ. ಘಟನೆಯಲ್ಲಿ ಶಿವನಪ್ಪ ದೇಸಾಯಿ ಅವರಿಗೆ ಸೇರಿದ ಮನೆಗಳು ಹಾಗೂ ಪಕ್ಕದಲ್ಲಿಯೇ ಇದ್ದ ಸಂತೋಷ ಕುಮಾರ ಹುರಕಡ್ಲಿ ಎಂಬುವರಿಗೆ ಸೇರಿದ ಮೇವಿನ ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ಒಟ್ಟು ರು. ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ ಎನ್ನಲಾಗಿದೆ. ಬೆಂಕಿ ನಂದಿಸಲು ನರಗುಂದ ಅಗ್ನಿ ಶಾಮಕ ದಳದ ಅಧಿಕಾರಿಗಳು ಹರಸಾಹಸ ಪಟ್ಟರು. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿ: ಮನೆ, ಟ್ರ್ಯಾಕ್ಟರ್ ಆಹುತಿ
ಗದಗ: ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ವಿದ್ಯುತ್ ತಂತಿಯಲ್ಲಿನ ದೋಷದಿಂದಾಗಿ ಹೊತ್ತಿಕೊಂಡ ಬೆಂಕಿಯಿಂದ ಮನೆ ಹಾಗೂ ಟ್ರ್ಯಾಕ್ಟರ್ ಸುಟ್ಟಹೋದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಈ ಘಟನೆಯಲ್ಲಿ ಶಿವಪ್ಪ ಗಡ್ಡಿ ಎಂಬುವರಿಗೆ ಸೇರಿದ ಮನೆ ಹಾಗೂ ಪ್ರಭುಗೌಡ ಎಂಬುವರ ಟ್ರ್ಯಾಕ್ಟರ್ ಬೆಂಕಿಗೆ ಆಹುತಿಯಾಗಿವೆ. ನರಗುಂದ ಹಾಗೂ ರೋಣದ ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.