ಜಿಲ್ಲೆಯ ಹಲವೆಡೆ ಮಳೆ, ಜೋರಾದ ಗಾಳಿ
ಗದಗ: ಸೋಮವಾರ ಸಂಜೆ ಜಿಲ್ಲೆಯ ಹಲವೆಡೆ ಮುಂಗಾರಿನ ಕೃತಿಕಾ ಮಳೆಯು ಆರಂಭವಾಗಿದ್ದು, ರೈತರಲ್ಲಿ ಹರ್ಷವನ್ನುಂಟು ಮಾಡಿದೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಅರ್ಧಗಂಟೆಗೂ ಹೆಚ್ಚು ಮಳೆಯಾಗಿದೆ. ಮುಳಗುಂದದಲ್ಲಿ 40 ನಿಮಿಷ, ಸೊರಟೂರನಲ್ಲಿ 15 ನಿಮಿಷ ಮಳೆಯಾಗಿದೆ. ನರೇಗಲ್ಲ, ಮುಂಡರಗಿ ಸೇರಿದಂತೆ ಹಲವು ಕಡೆಗಳಲ್ಲಿ ಮೋಡಕವಿದ ವಾತಾವರಣ ಮುಂದುವರಿದಿದೆ. ಜೋರಾದ ಗಾಳಿಯ ಸಮೇತ ಬಂದ ಮಳೆಯಿಂದಾಗಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಕಡಿತಗೊಳಿಸಲಾಯಿತು. ಇದರಿಂದಾಗಿ ಸಾರ್ವಜನಿಕರು ಕೆಲಕಾಲ ತೊಂದರೆ ಅನುಭವಿಸುವಂತಾಯಿತು.
ನೀರು ಪೂರೈಕೆ ಮಾಹಿತಿ
ಗದಗ: ನಗರದ ದಾಸರ ಓಣಿ, ದಖನಿ ಗಲ್ಲಿ, ರಂಗನವಾಡ, ಮಕಾನ ಗಲ್ಲಿ, ನಾಲ್ವಾಡ ಗಲ್ಲಿ, ಉಡುಚಮ್ಮನ ಗುಡಿಲೈನ್, ಸರ್ವೋದಯ ಕಾಲೋನಿ, ಹನುಮನ ಗರಡಿ, ರಾಚೂಟೇಶ್ವರ ನಗರ, ಗೆಳೆಯರ ಬಳಗ, ಅಕ್ಕಿಯವರ ಲೈನ್, ಭೂಮಾ ಫೈನಾನ್ಸ್ ಈ ಭಾಗಗಳಲ್ಲಿ ಮಂಗಳವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.