ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ತಾಲೂಕು ಕೇಂದ್ರದಲ್ಲಿಲ್ಲ ಸರ್ಕಾರಿ ಪ್ರೌಢಶಾಲೆ

Lingaraj Badiger
Updated On : 21 May 2013, 11:20 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 20
ಮುಂಡರಗಿ ಪಟ್ಟಣದಲ್ಲಿ 4 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, 2 ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಎಲ್ಲ ಶಾಲೆಗಳಿಂದ 9ನೇ ತರಗತಿಗೆ ಸೇರ್ಪಡೆಗೊಳ್ಳಲು ಮುಂಡರಗಿ ಪಟ್ಟಣದಲ್ಲೊಂದು ಸರ್ಕಾರಿ ಪ್ರೌಢಶಾಲೆಯ ಆವಶ್ಯಕತೆ ಹೆಚ್ಚಿದೆ.
ಪ್ರೌಢ ಶಾಲೆ ಸಮಸ್ಯೆಯಿಂದಾಗಿ ಪುರಸಭೆ ವ್ಯಾಪ್ತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರೌಢ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ತಾಲೂಕಿನಲ್ಲಿ ಒಂದು ಉರ್ದು ಪ್ರೌಢಶಾಲೆ, 16 ಸರ್ಕಾರಿ ಪ್ರೌಢ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಪಟ್ಟಣದ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ 50 ವಿದ್ಯಾರ್ಥಿಗಳು 7ನೇ ತರಗತಿಯಿಂದ ಉತ್ತೀರ್ಣರಾಗಿದ್ದು, ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ 54 ವಿದ್ಯಾರ್ಥಿನಿಯರು, ಎಸ್.ಎಂ. ಭೂಮರಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 40 ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟೆ ಮುಂಡರಗಿಯಲ್ಲಿ 80 ವಿದ್ಯಾರ್ಥಿಗಳು ಪ್ರಸಕ್ತ ವರ್ಷ ತೇರ್ಗಡೆಯಾಗಿದ್ದಾರೆ. ಕಳೆದ ವರ್ಷದಿಂದ ಪಟ್ಟಣದ ಸರ್ಕಾರಿ ಮಾದರಿ ಕೇಂದ್ರ ಶಾಲೆ, ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಕೋಟೆ ಶಾಲೆಯಲ್ಲಿ ಸರ್ಕಾರ 8ನೇ ತರಗತಿಯನ್ನು ಪ್ರಾರಂಭಿಸಿದ್ದು, 9 ಹಾಗೂ 10ನೇ ತರಗತಿಗಾಗಿ ವಿದ್ಯಾರ್ಥಿಗಳು ಮತ್ತೆ ಬೇರೆಡೆ ಹೋಗುವುದು ಅನಿವಾರ್ಯವಾಗಿದೆ.
ಬಡತನದ ಸಮಸ್ಯೆ: ಪ್ರತಿ ವರ್ಷ 8ನೇ ತರಗತಿ ಪಾಸಾದ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 9 ಹಾಗೂ 10ನೇ ತರಗತಿಗೆ ಸೇರ್ಪಡೆಗೊಳ್ಳಲು ತೊಂದರೆಯಾಗಿದೆ. ಕೆಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಡತನ ಸಮಸ್ಯೆ ಎದುರಾಗಿದೆ. ಸ್ಥಳೀಯವಾಗಿ ಸರ್ಕಾರಿ ಪ್ರೌಢ ಶಾಲೆಯಿದ್ದರೆ ಅಂಥವರ ಕಲಿಕೆಗೆ ಅನುಕೂಲವಾಗುತ್ತದೆ. ಇದೀಗ ಅವರು ಇಲ್ಲಿನ ಖಾಸಗಿ ಸಂಸ್ಥೆಯಲ್ಲಿನ ಪ್ರೌಢ ಶಾಲೆಗಳಿಗೆ ಸೇರಲು ಹೋದರೆ ಅವರಿಗೆ ಡೊನೇಶನ್ ಹಾವಳಿ ಹಾಗೂ ಪಠ್ಯ ಪುಸ್ತಕಗಳನ್ನು ಕೊಂಡುಕೊಳ್ಳಲು ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಪಾಲಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ವಿದ್ಯಾರ್ಥಿನಿಯರು ಶಿಕ್ಷಣ ವಂಚಿತ: ವಿದ್ಯಾರ್ಥಿನಿಯರಲ್ಲಿ ಈ ಸಮಸ್ಯೆ ಹೆಚ್ಚಿದೆ. ಪ್ರೌಢ ಶಿಕ್ಷಣಕ್ಕಾಗಿ ಹೆಣ್ಣುಮಕ್ಕಳನ್ನು ಬೇರೆ ಊರಿನ ಶಾಲೆಗಳಿಗೆ ಕಳುಹಿಸಲು ಸಾಧ್ಯವಾಗದೇ ಇರುವುದರಿಂದ ಮುಂಡರಗಿ ಪಟ್ಟಣದ ಹಲವಾರು ಬಡ ಕುಟುಂಬದ ವಿದ್ಯಾರ್ಥಿನಿಯರು ಪ್ರೌಢ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರಿ ಪ್ರೌಢ ಶಾಲೆಗೆ ಹೋಗಬೇಕಾದಲ್ಲಿ ಮುಂಡರಗಿಯಿಂದ 5 ಕಿಲೋ ಮೀಟರ್ ದೂರದ ಬರದೂರ ಗ್ರಾಮಕ್ಕೆ ತೆರಳಬೇಕು. ಇಲ್ಲವಾದಲ್ಲಿ 18 ಕಿ.ಮೀ ದೂರದ ಶಿಂಗಟಾಲೂರಿನಲ್ಲಿ ಸರ್ಕಾರಿ ಪ್ರೌಢಶಾಲೆಗೆ ಹೋಗಬೇಕು. ಇಲ್ಲವೇ 8 ಕಿ.ಮೀ ಅಂತರದ ನಾಗರಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಪ್ರೌಢ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಇದು ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ದೊಡ್ಡ ಕೊಡಲಿ ಪೆಟ್ಟು ನೀಡುತ್ತಿದೆ.
ಪಾಲಕರ ತೊಂದರೆ ಕೇಳುವರಿಲ್ಲ: ತಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣವನ್ನು ಕೊಡಿಸಬೇಕೆನ್ನುವ ಪಾಲಕರು ಇಲ್ಲಿನ ಖಾಸಗಿ ಸಂಸ್ಥೆಗಳ ಪ್ರೌಢ ಶಾಲೆಗಳಿಗೆ ತೆರಳಿ ಅಲ್ಲಿ ಡೊನೇಶನ್, ಫೀ, ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ಇತರೆ ಖರ್ಚುಗಳನ್ನು ನಿಭಾಯಿಸಲು ಹರಸಾಹಸ ಪಡಬೇಕಾಗಿದೆ. ಒಂದು ವೇಳೆ ಮಕ್ಕಳನ್ನು ಬೇರೆ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಗಳಿಗೆ ಕಳುಹಿಸುವ ಕುರಿತು ಯೋಚಿಸಿದರೆ ಪ್ರತಿ ದಿನ ಅವರು ಮುಂಡರಗಿಯಿಂದ ಓಡಾಡಲು ಬಸ್ ಪಾಸ್ ತೆಗೆಸಬೇಕು. ಈ ಕುರಿತು ಹಲವಾರು ಜನಪ್ರತಿನಿಧಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದರು.
- ಶರಣು ಸೊಲಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement