ನವೋದಯಕ್ಕೆ ಆಯ್ಕೆ: ಅನುಮಾನದ ಹುತ್ತ
ಕನ್ನಡಪ್ರಭ ವಾರ್ತೆ, ಗದಗ, ಮೇ 20
ಕೇಂದ್ರ ಸರ್ಕಾರ ಗ್ರಾಮೀಣ, ಬಡ ಪ್ರತಿಭಾವಂತ ಮಕ್ಕಳಿಗೂ ಸಿಬಿಎಸ್ಸಿ ಮಾದರಿಯ ಶಿಕ್ಷಣ ಸಿಗಬೇಕು ಎನ್ನುವ ದೃಷ್ಟಿಯಿಂದ, ಪ್ರತಿ ಜಿಲ್ಲೆಗೆ ಒಂದರಂತೆ ಪ್ರಾರಂಭಿಸಿರುವ ಜವಾಹರ ನವೋದಯ ಶಾಲೆಗೆ ಮಕ್ಕಳ ಆಯ್ಕೆ ಮಾಡುವ ಪ್ರಕ್ರಿಯೆ ಹಿಂದೆ ಹಲವು ರೀತಿಯ ಅನುಮಾನ ಕಂಡು ಬರುತ್ತಿದ್ದು, ನವೋದಯ ಶಾಲೆಯ ಪ್ರವೇಶ ಪ್ರಕ್ರಿಯೆ ಪಾರದರ್ಶಕತೆ ಬಗ್ಗೆ ಸಂಶಯ ಮೂಡಲಾರಂಬಿಸಿದೆ.
ಪ್ರತಿ ವರ್ಷ 6ನೇ ತರಗತಿಯಿಂದ ನವೋದಯ ಶಾಲೆಗೆ ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ. ಪ್ರವೇಶ ನೀಡಲು 5ನೇ ತರಗತಿಯಲ್ಲಿ ಅಭ್ಯಶಿಸುವ ವಿದ್ಯಾರ್ಥಿಗಳಿಗೆ ಜನವರಿ ಅಥವಾ ಫೆಬ್ರುವರಿಯಲ್ಲಿಯೇ ಆಯಾ ತಾಲೂಕು ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಜಿಲ್ಲೆಗೆ 80 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಆದರೆ, ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಉಳ್ಳವರ ಮಕ್ಕಳೇ. ಹೀಗಾಗಿ ಆಯ್ಕೆ ಪ್ರಕ್ರಿಯೆಯ ಬಗ್ಗೆ ಹಲವು ಅನುಮನಗಳು ಸೃಷ್ಟಿಯಾಗುತ್ತಿವೆ. ಆರ್ಥಿಕವಾಗಿ ಹಿಂದುಳಿದ ಅರ್ಧದಷ್ಟಾದರೂ ವಿದ್ಯಾರ್ಥಿಗಳಿಗೆ ಮೀಸಲಾತಿ ಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಸಮಗ್ರ ಫಲಿತಾಂಶ ಪ್ರಕಟಿಸಲಿ: ಜವಾಹರ ನವೋದಯ ವಿದ್ಯಾಲಯಗಳ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲ ಅಭ್ಯರ್ಥಿಗಳ ಫಲಿತಾಂಶ ಪ್ರಕಟಿಸಬೇಕು ಎಂಬುದು ಪಾಲಕರ ಹಲವು ವರ್ಷಗಳ ಕೂಗಾಗಿದೆ. ಆದರೆ, ನವೋದಯ ಪರೀಕ್ಷೆ ನಡೆಸುತ್ತಿರುವವರು ಇದಕ್ಕೆ ಸ್ಪಂದಿಸುತ್ತಿಲ್ಲ. ಪರೀಕ್ಷೆ ಬರೆದ ಅಭ್ಯರ್ಥಿಗಳ ಎಲ್ಲರ ಫಲಿತಾಂಶ ಪ್ರಕಟಿಸದೇ ಕೇವಲ ಆಯ್ಕೆಯಾದವರ ಪಟ್ಟಿ ಪ್ರಕಟಿಸುವ ಪದ್ಧತಿ ಸದ್ಯ ಜಾರಿಯಲ್ಲಿದೆ. ಪ್ರವೇಶ ದೊರೆಯದ ವಿದ್ಯಾರ್ಥಿಗಳ ಅಂಕಪಟ್ಟಿ ಪ್ರಕಟಿಸದೇ ಇರುವುದರಿಂದ ಪ್ರವೇಶ ಪ್ರಕ್ರಿಯೆ ಬಗ್ಗೆ ಪಾಲಕರು ಅಸಮಾಧಾನ ವ್ಯಕ್ತಪಡಿಸುವಂತಾಗಿದ್ದು ಇದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಕಂಡು ಬರುತ್ತಿರುವ ಸಾಮಾನ್ಯ ಸಮಸ್ಯೆ.
ತರಬೇತಿ ಅಗತ್ಯ: ನವೋದಯ ಶಾಲೆಗಳಲ್ಲಿ ಪ್ರವೇಶ ಪಡೆಯಬೇಕೆಂದರೆ ವಿದ್ಯಾರ್ಥಿಯು 5ನೇ ತರಗತಿಯಲ್ಲಿ ಓದುತ್ತಿರುವಾಗಲೇ ವರ್ಷವಿಡೀ ಕ್ಲಷ್ಟಕರವಾದ ತರಬೇತಿ ಪಡೆದು ಸಿದ್ಧಗೊಳ್ಳುವ ಅನಿವಾರ್ಯತೆ ಇದೆ. ಅನೇಕ ಕಡೆಗಳಲ್ಲಿ ಇಂತಹ ತರಬೇತಿ ಕೇಂದ್ರಗಳು ನಾಯಿಯ ಕೊಡೆಗಳಂತೆ ತಲೆ ಎತ್ತಿವೆ. ಆರ್ಥಿಕವಾಗಿ ಹಿಂದುಳಿದವರ ಮಕ್ಕಳು ಇಂತಹ ತರಬೇತಿ ಕೇಂದ್ರಗಳ ಮೂಲಕ ಸಾವಿರಾರು ರು. ವ್ಯಯಮಾಡಿ ತರಬೇತಿ ಪಡೆದುಕೊಳ್ಳುವುದು ಅಸಾಧ್ಯ ಎಂಬಂತಾಗಿದ್ದು, ಸಹಜವಾಗಿಯೇ ಉಳ್ಳವರ ಮಕ್ಕಳಿಗೆ ಮಾತ್ರ ಪ್ರವೇಶ ದೊರಕುವಂತಾಗಿದೆ. ಸರ್ಕಾರವೇ ಮಕ್ಕಳಿಗೆ ತರಬೇತಿ ನೀಡಬೇಕಿದೆ.
ವರ್ಷದಿಂದ ಮತ್ತಷ್ಟು ಕ್ಲಿಷ್ಟ: ಕಳೆದ ವರ್ಷದಿಂದ ಪ್ರವೇಶ ಪರೀಕ್ಷೆಯಲ್ಲಿ ತುಸು ಬದಲಾವಣೆಯನ್ನೂ ತಂದಿರುವ ಹಿನ್ನೆಲೆಯಲ್ಲಿ ಉತ್ತರ ಬರೆಯುವುದು ಕಷ್ಟಕರವಾಗಿದ್ದು, ಮಕ್ಕಳಲ್ಲಿ ಗೊಂದಲ ಉಂಟಾಗಲು ಕಾರಣವಾಗಿದೆ. ಮಾತ್ರವಲ್ಲ ನಿಗದಿಪಡಿಸಿದ ಸಮಯವೂ ಸಾಲದಾಗಿದೆ. ಪ್ರಶ್ನೆಗಳ ಎದುರೇ ಉತ್ತರಗಳನ್ನು ಗುರುತಿಸಬಹುದಾದಂತಹ ಅವಕಾಶ ಕಲ್ಪಿಸಿದರೆ ಸುಲಭವಾಗುತ್ತದೆ. ಗ್ರಾಮೀಣ ಭಾಗದ ಶೇ. 75ರಷ್ಟು ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಲಾಗುತ್ತಿದೆ. ಆದರೆ, ಅವರಲ್ಲಿಯೂ ಬಡ, ಹಿಂದುಳಿದ ಮಕ್ಕಳ ಆಯ್ಕೆ ಕಡಿಮೆ. ಪ್ರತಿವರ್ಷ ಪ್ರತಿ ಜಿಲ್ಲೆಯಿಂದ ಕನಿಷ್ಠ 4 ಸಾವಿರ ಅಂದರೆ ರಾಜ್ಯಾದ್ಯಂತ 15ಸಾವಿರಕ್ಕೂ ಹೆಚ್ಚು ಮಕ್ಕಳು ಪರೀಕ್ಷೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಆಯ್ಕೆಯಾದವರ ಪಟ್ಟಿ ಮಾತ್ರ ಪ್ರಕಟವಾಗುತ್ತಿದ್ದು, ಕನಿಷ್ಠ ಅನುತ್ತೀರ್ಣರಾದ ಮಕ್ಕಳು ಪಡೆದ ಅಂಕಗಳಾದರೂ ಎಷ್ಟು ಎಂಬ ವಿಷಯ ಬಹಿರಂಗಗೊಳ್ಳದೇ ಪಾಲಕರಲ್ಲಿ ತೀವ್ರ ನಿರಾಸೆ ಉಂಟಾಗುವಂತಾಗಿದೆ.
- ಶಿವಕುಮಾರ ಕುಷ್ಟಗಿ