ವಸತಿ ಪ್ರಾಥಮಿಕ ಶಾಲೆ ಪುನಾರಂಭ
ಬೆಟಗೇರಿ: ಸ್ಥಳೀಯ ಹುಯಿಲಗೋಳ ರಸ್ತೆಯಲ್ಲಿರುವ ಮಹಾರಾಣಾ ಪ್ರತಾಪಸಿಂಹ ವಸತಿ ಪ್ರಾಥಮಿಕ ಶಾಲೆ ಜೂನ್ 1ರಿಂದ ಪುನಾರಂಭಗೊಳ್ಳಲಿದೆ. 1ರಿಂದ 7ನೇ ತರಗತಿ ವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರವೇಶಗಳು ಆರಂಭಗೊಂಡಿದ್ದು, ಜಾತಿ, ಆದಾಯ ಪ್ರಮಾಣ ಪತ್ರ, 3 ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ, ಕಳೆದ ಸಾಲಿನ ಅಂಕಪಟ್ಟಿ ಜತೆ ಪಾಲಕರು ಕೂಡಲೇ ಕಾರ್ಯಾಲಯದಲ್ಲಿ ಸಂಪರ್ಕಿಸಿ ತಮ್ಮ ಮಕ್ಕಳಿಗೆ ಪ್ರವೇಶ ಪಡೆಯಲು ಕೋರಲಾಗಿದೆ.
ದಂಡಿನ ದುರ್ಗಾ ಜಾತ್ರೆ: ಕೋಳಿಗಳಿಗೆ ಬೇಡಿಕೆ
ಗದಗ: ಬೆಟಗೇರಿ ಹೊರವಲಯದಲ್ಲಿರುವ ದಂಡಿನ ದುರ್ಗಾ ದೇವಸ್ಥಾನದ ಜಾತ್ರಾ ಮಹೋತ್ಸವವು ಮಂಗಳವಾರ ಬೆಳಗಿನಜಾವ ನಡೆಯಲಿದೆ. ಜಾತ್ರೆಯ ಅಂಗವಾಗಿ ದೇವಿಯ ವಿಶೇಷ ಪೂಜೆಗೆ ಭಕ್ತರು ಜವಾರಿ ಕೋಳಿಗಳನ್ನೇ ಬಳಸುವುದರಿಂದ ಸೋಮವಾರ ಸಂಜೆ ನಗರದಾದ್ಯಂತ ಜವಾರಿ ಕೋಳಿಗಳ ವ್ಯಾಪಾರ ಬಲು ಜೋರಾಗಿಯೇ ನಡೆಯಿತು. ಈ ಜಾತ್ರೆಗೆ ದೂರದ ಮಹಾರಾಷ್ಟ್ರ, ಗೋವಾ, ಆಂದ್ರಪ್ರದೇಶ, ತಮಿಳುನಾಡು, ಕೇರಳದಿಂದ ಭಕ್ತರು ಆಗಮಿಸುತ್ತಿದ್ದು, ಗದುಗಿಗೆ ಆಗಮಿಸಿದ ನಂತರವೇ ದೇವಿಗೆ ಅರ್ಪಣೆ ಮಾಡಲು ಕೋಳಿಗಳನ್ನು ಖರೀದಿಸುವುದರಿಂದ ಒಮ್ಮೆಲೆ ಕೋಳಿಗಳಿಗೆ ಭಾರೀ ಬೇಡಿಕೆ ಬಂದಿದೆ. ಬೆಟಗೇರಿ ಬಸ್ ನಿಲ್ದಾಣ, ಹೆಲ್ತ್‌ಕ್ಯಾಂಪ್ ಹಾಗೂ ಸೆಟ್ಲ್‌ಮೆಂಟ್ ಭಾಗದ ಪ್ರಮುಖ ರಸ್ತೆಯಲ್ಲಿಯೇ ಕೋಳಿಗಳ ವ್ಯಾಪಾರ ನಡೆಯಿತು.