ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗ್ರಾಮೀಣರ ಬದುಕು ಹಸನಾದೀತೆ?

Rashmi Kasaragodu
Updated On : 22 May 2013, 11:49 am

ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಮೇ 21
ರಾಜ್ಯದ ಶೇ. 65ರಷ್ಟು ಜನ ಗ್ರಾಮೀಣ ಪ್ರದೇಶಗಳಲ್ಲಿದ್ದು, ಹಾಗಾಗಿ ಅವರ ಬದುಕು ಮತ್ತು ಜೀವನ ಮಟ್ಟ ಸುಧಾರಣೆ ಮಾಡುವಲ್ಲಿ ಗ್ರಾಮೀಣಾಭಿವೃದ್ಧಿ ಖಾತೆಯ ಮಹತ್ವದ್ದಾಗಿದೆ. ಈ ಖಾತೆಗೆ ಗ್ರಾಮೀಣ ಪರಿಸರದಿಂದಲೇ ಬಂದಿರುವ ಎಚ್.ಕೆ. ಪಾಟೀಲ ಅಧಿಕಾರ ವಹಿಸಿಕೊಂಡಿರುವುದು ಹೊಸತನ ಬಯಸುವವರಲ್ಲಿ ಮತ್ತಷ್ಟು ಆಸೆ ಚಿಗುರಿದೆ.
ಸರ್ಕಾರ ಗ್ರಾಮ ಪಂಚಾಯ್ತಿಗಳ ಸಬಲೀಕರಣಕ್ಕಾಗಿ ಪಿಡಿಓ ಎನ್ನುವ ಹೊಸ ಹುದ್ದೆ ಸೃಷ್ಟಿಸಿ, ನೇಮಕಾತಿ ಮಾಡಿದೆ. ಈ ಮೊದಲೇ ಕಾರ್ಯದರ್ಶಿಗಳು ಕಾರ್ಯ ನಿರ್ವಹಿಸುತ್ತಿದ್ದು, ಹೊಸ ನೇಮಕಾತಿಯಿಂದ ಹಳಬರು ಮತ್ತು ಹೊಸಬರ ಮಧ್ಯೆ ಸಾಮರಸ್ಯ ಮೂಡದೇ ಗ್ರಾಮಗಳಲ್ಲಿನ ಸಮಸ್ಯೆಗಳು ಹಾಗೆಯೇ ಉಳಿದಿವೆ.
ರಾಜ್ಯದ 4568 ಗ್ರಾಪಂಗಳಲ್ಲಿ ಶೇ.68ರಷ್ಟು ಗ್ರಾಪಂಗಳಲ್ಲಿ ಕುಡಿವ ನೀರಿಗಾಗಿ ಇಂದಿಗೂ ಆಶ್ರಯಿಸಿರುವುದು ಕೊಳವೆಬಾವಿಗಳನ್ನು. ಆದರೆ, ಇವುಗಳಲ್ಲಿ ಶೇ. 40 ರಷ್ಟು ಕೊಳವೆಬಾವಿಗಳು ಅಂತರ್ಜಲದ ಕೊರತೆಯಿಂದ ಬತ್ತಿ ಹೋಗಿವೆ ಎನ್ನುವ ವರದಿಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯೇ ಈ ಹಿಂದೆ ಸರ್ಕಾರಕ್ಕೆ (28-2-2013) ಸಲ್ಲಿಸಿದೆ. ಈ ಮದ್ಯೆ ಮತ್ತೆರಡು ತಿಂಗಳು ಕಳೆದು ಹೋಗಿದ್ದು ಮಳೆ ಮಾತ್ರ ಸುರಿದಿಲ್ಲ. ಇನ್ನು ನೀರು ಲಭ್ಯವಿರುವ ಕೊಳವೆಬಾವಿಗಳಲ್ಲಿಯೇ ಶೇ.28ರಷ್ಟು ಕೊಳವೆಬಾವಿಗಳಲ್ಲಿನ ನೀರಿನಲ್ಲಿ ಅತಿಯಾದ ಫ್ಲೋರೈಡ್ ಅಂಶ ಪತ್ತೆಯಾಗಿದ್ದು, ಸಾರ್ವಜನಿಕರು ಅದೇ ನೀರನ್ನೇ ಕುಡಿಯುತ್ತಿದ್ದಾರೆ. ಉತ್ತರ ಕರ್ನಾಟಕದ 8 ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೆರೆಗಳಲ್ಲಿ ಬೇಸಿಗೆಯಲ್ಲಿ ನೀರು ಖಾಲಿಯಾಗುತ್ತಿದ್ದಂತೆ ಅತಿಯಾದ ಸಮಸ್ಯೆ ಸೃಷ್ಟಿಯಾಗುತ್ತಿದೆ. ಇನ್ನು ಸ್ವಚ್ಛತೆಗೆ ಆದ್ಯತೆ ನೀಡದೇ ಇರುವ ಗ್ರಾಪಂಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಹಲವಾರು ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಗ್ರಾಪಂ ನೌಕರರ ಸಮಸ್ಯೆಗೆ ಮುಕ್ತಿ ಸಿಗಲಿ: ರಾಜ್ಯದ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಹತ್ತಾರು ವರ್ಷಗಳಿಂದ ಪಂಪ್ ಆಪರೇಟರ್, ಬಿಲ್ ಕಲೆಕ್ಟರ್, ಗುಮಾಸ್ತ ಸೇರಿದಂತೆ 10 ಸಾವಿರಕ್ಕೂ ಹೆಚ್ಚಿನ ನೌಕರರ ಭದ್ರತೆ ಇಲ್ಲದೇ ಅತಂತ್ರ ಹಾಗೂ ಅತ್ಯಲ್ಪ ಸಂಬಳದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಅವರಲ್ಲಿಯೇ ಕೆಲವರು ನಿವೃತ್ತಿ ಅಂಚಿಗೆ ಬಂದಿದ್ದು, ಗ್ರಾಪಂ ಸದಸ್ಯರು ಸಂಬಳ ನೀಡಿದಾಗಲೇ ಊಟ ಮಾಡುವಂತಹ ದುಸ್ಥಿತಿಯಲ್ಲಿದ್ದಾರೆ. ಇವರಿಗೆಲ್ಲಾ ಸೂಕ್ತವಾದ ವೇತನ ಹಾಗೂ ಸೇವಾ ಭದ್ರತೆ ನೀಡಬೇಕಿದೆ.
ವಿದ್ಯುತ್ ಸಮಸ್ಯೆ ಗಂಭೀರ: ವಿದ್ಯುತ್ ಎನ್ನುವುದು ಅಭಿವೃದ್ಧಿಯ ಪ್ರಮುಖ ಅಸ್ತ್ರ. ಆದರೆ, 4-5 ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಇದರಿಂದ ಗ್ರಾಪಂಗಳು ಸಾರ್ವಜನಿಕರಿಗೆ ಬೇಕಾಗುವಷ್ಟು ನೀರು ಸಂಗ್ರಹಿಸಲು ಸಹಿತ ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ಓದಲು ವಿದ್ಯುತ್ ಲಭ್ಯವಾಗುತ್ತಿಲ್ಲ. ಅಧಿಕಾರಿಗಳು ನಗರ ಪ್ರದೇಶಗಳಿಗೆ ದಿನದ 24 ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಾರೆ. ಆದರೆ, ಗ್ರಾಮೀಣಕ್ಕೆ ಕನಿಷ್ಠ ವಿದ್ಯುತ್ ನೀಡದೇ ಅವೈಜ್ಞಾನಿಕ ನೀತಿ ಅನುಸರಿಸುತ್ತಿದ್ದು, ಇದರಿಂದ ಹಲವಾರು ಜನರು ನಗರಗಳತ್ತ ವಲಸೆ ಬರುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳ ಬೆಳವಣಿಗೆಗೆ ಇದು ಮಾರಕವಾಗಿದೆ.
ಶೌಚಾಲಯ ನಿರ್ಮಾಣವಾಗಲಿ: ಗ್ರಾಮೀಣ ಜನತೆ ಇಂದು ನೈರ್ಮಲ್ಯಕ್ಕೆ ಹೆಚ್ಚಿನ ಗಮನ ನೀಡುತ್ತಿಲ್ಲ. ಮುಖ್ಯವಾಗಿ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುತ್ತಿಲ್ಲ. ಇದಕ್ಕೆ ಅವರು ಹೇಳುವ ಸಮಸ್ಯೆ ಕುಡಿವ ನೀರೇ ಸಿಗುತ್ತಿಲ್ಲ. ಇನ್ನು ಶೌಚಾಲಯಕ್ಕೆ ಎಲ್ಲಿಂದ ತರುವುದು ಎನ್ನುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿಯ ಮೂಲ ಕಲ್ಪನೆ ಈವರೆಗೂ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾಕಾರಗೊಂಡಿಲ್ಲ. ನೂತನ ಸಚಿವರು ಶುದ್ಧ ಕುಡಿವ ನೀರನ ಜತೆಗೆ ಶೌಚಾಲಯ, ಗ್ರಾಮ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement