ಪಂಚಾಯತ್‌ರಾಜ್ ಸಂಘಟನೆಯಿಂದ ಜಾಗೃತಿ
ಮುಂಡರಗಿ: ಆಡಳಿತಾರೂಢ ಸರ್ಕಾರದಿಂದ ಗ್ರಾಮೀಣ ಪ್ರದೇಶಗಳಿಗೆ ದೊರೆಯುವ ಹಲವಾರು ಯೋಜನೆಗಳ ಕುರಿತು ಜನರಲ್ಲಿ ತಿಳಿವಳಿಕೆ ನೀಡಿ ಆ ಯೋಜನೆಗಳನ್ನು ಗ್ರಾಮೀಣ ಭಾಗದ ಜನತೆಗೆ ತಲುಪಿಸುವುದು ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಕೆಲಸವಾಗಿದೆ ಎಂದು ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ರಾಜ್ಯಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.
ಅವರು ಮಂಗಳವಾರ ಪಟ್ಟಣದ ಗಾಂಧೀಭವನದಲ್ಲಿ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ತಾಲೂಕು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದದರು. ಸರ್ಕಾರದದಿಂದ ಅಭಿವೃದ್ಧಿಗಾಗಿ ಬಂದಂತಹ ಶಾಸಕರ ಹಾಗೂ ಸಂಸದರ ಅನುದಾನವನ್ನು ಪಾರದರ್ಶಕವಾಗಿ ಜನತೆಗೆ ತಲುಪಿಸುವುದು, ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯಲು ಸಂಘಟನೆ ಹೆಚ್ಚಿನ ಕಾರ್ಯನಿರ್ವಹಿಸಲಿದೆ. ಎಚ್.ಕೆ. ಪಾಟೀಲ ಅವರಿಗೆ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆ ಸಚಿವರನ್ನಾಗಿ ಮಾಡಿದ್ದು, ಈ ಸಂಘಟನೆಗೆ ಆನೆಬಲ ಬಂದಂತಾಗಿದೆ. ಮುಂಬರುವ ದಿನಗಳಲ್ಲಿ ಪ್ರತಿ ಗ್ರಾಮಗಳಲ್ಲಿ ಎಲ್ಲ ಸಮುದಾಯದ ಜನತೆಯನ್ನು ಒಗ್ಗೂಡಿಸಿ ಸಂಘಟನೆಯನ್ನು ಬಲಪಡಿಸಲಾಗುವುದು ಎಂದರು.ಪಕ್ಷದ ಹಿರಿಕಿರಿಯ ಎಲ್ಲ ಕಾರ್ಯಕರ್ತರು ಪ್ರತಿ ಗ್ರಾಮಗಳಿಗೆ ತೆರಳಿ ಪಂಚಾಯತ್ ರಾಜ್ ಸಂಘಟನೆಯ ಅರಿವು ಮೂಡಿಸಬೇಕು. ಗುಣಾತ್ಮಕ ವಿಚಾರ, ಸೃಜನಶೀಲ ಚಿಂತನೆವುಳ್ಳ ಕಾರ್ಯಕರ್ತರು ಮುಂದೊಂದು ದಿನ ಕಾಂಗ್ರೆಸ್‌ನಲ್ಲಿ ನಾಯಕರಾಗುತ್ತಾರೆ ಎಂದರು. ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಎಲ್ಲ ಗ್ರಾಮಗಳಿಗೆ ಶುದ್ದ ಕುಡಿವ ನೀರು, ಮಹಿಳಾ ಶೌಚಾಲಯ, ಹಾಗೂ ಆಶ್ರಯ ಮನೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಹಾಗೂ ಸಿಎಂ ಸಿದ್ದರಾಮಯ್ಯನವರೊಂದಿಗೆ ಚರ್ಚಿಸಿದ್ದು, ಈ ಬಾರಿ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ರಾಜೀವ್‌ಗಾಂಧಿ ಸಂಘಟನೆಯಿಂದ ಸಾಕಷ್ಟು ಅನುಕೂಲವಾಗಿದೆ. ಮುಂಬರುವ ದನಗಳಲ್ಲಿ ಎಲ್ಲರೂ ಸೇರಿ ಸಂಘಟನೆಯನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಬಲಪಡಿಸೋಣ ಎಂದರು. ಈ ಸಂದರ್ಭದಲ್ಲಿ ಹೆಸರೂರ, ಬಿದರಳ್ಳಿ, ಬಾಗೇವಾಡಿ, ಮೇವುಂಡಿ, ಕಲಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಕುರಿತು ಆಯಾ ಗ್ರಾಮದ ಸದಸ್ಯರು ಹಾಗೂ ಮುಖಂಡರು ಸಭೆಗೆ ವಿವರವಾಗಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ತಿಮ್ಮರಡ್ಡೆಪ್ಪ ಮೇಟಿ, ಧೀರನಗೌಡ ಪಾಟೀಲ, ಗಂಗಣ್ಣ ಸೊರಟೂರ, ಎಸ್.ಡಿ. ಮಕಾಂದಾರ, ಸೋಮಣ್ಣ ಗುಡ್ಡದ, ಹೊಳಲಾಪುರ ವಕೀಲರು, ಡಿ.ಡಿ. ಮೋರನಾಳ, ಬಸವರಾಜ ಬಿಸನಳ್ಳಿ, ಲಿಂಗರಾಜಗೌಡ ಪಾಟೀಲ, ರಾಮಣ್ಣ ಬಳ್ಳಾರಿ, ಪಾಲಾಕ್ಷಿ ಗಣದಿನ್ನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಬಸವರಾಜ ರಾಮೇನಹಳ್ಳಿ ನಿರೂಪಿಸಿ, ನಾಗೇಶ ಹುಬ್ಬಳ್ಳಿ ವಂದಿಸಿದರು.