ಬಿರುಸಿನ ಆಲಿಕಲ್ಲು ಮಳೆ
ಗಜೇಂದ್ರಗಡ: ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಸೋಮವಾರ ಸಂಜೆ ಬಿರುಗಾಳಿ ಸಹಿತ ಸುರಿದ ರಭಸದ ಮಳೆ ಬಿಸಿಲಿನ ತಾಪಕ್ಕೆ ಕೊಂಚ ವಿರಾಮ ಹೇಳಿದೆ. ಗೋಗೇರಿ ಗ್ರಾಮ ಬಳಿ ಸುರಿದ ರಾಶಿಗಟ್ಟಲೆ ಆಲಿಕಲ್ಲು ಜನರ ಕುತೂಹಲ ಕೆರಳಿಸಿತು.
ಸೋಮವಾರ ಸಂಜೆ ಮೋಡ ಕವಿದಿತ್ತು. ಗುಡುಗು ಸಿಡಿಲು ಹಾಗೂ ಬಿರುಗಾಳಿಯ ಅರ್ಭಟದೊಂದಿಗೆ ಮಳೆ ಸುರಿಯಿತು. ಸಮೀಪದ ಗೋಗೇರಿ ಬಳಿ ವಿದ್ಯತ್ ಕಂಬಗಳು ಧರೆಗೆ ಉರುಳಿದವು. ಖಾಜೇಸಾಬ ಬಾಗವಾನ, ದುರುಗಪ್ಪ ಭೋಸಲೆ, ದುರಗಪ್ಪ ಗಾರಗಿ ಅವರಿಗೆ ಸೇರಿದ ವೀಳ್ಯದೆಲೆ ಪೈರು ನೆಲಕ್ಕುರಳಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.
ಸ್ಥಳೀಯ ಜೋಡು ರಸ್ತೆ, ಮುಖ್ಯ ತರಕಾರಿ ಮಾರುಕಟ್ಟೆಯಲ್ಲಿ ಸಣ್ಣ ವ್ಯಾಪಾರಸ್ಥರು ಮಳೆಯಿಂದ ತೀವ್ರ ತೊಂದರೆ ಅನುಭವಿಸಿದರು. ಮನೆ ಮೇಲಿರುವ ತಗಡುಗಳು ಹಾರಿ ಹೋದವು. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮುಂಗಾರು ಹಂಗಾಮಿಗೆ ಈ ಮಳೆ ಪೂರಕವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.