ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಲ್ಲಿಗೆ ಬೆಳೆದವರ ಬಾಳು ಘಮಘಮ

Rashmi Kasaragodu
Updated On : 22 May 2013, 11:50 am

 ಅಶೋಕ ಸೊರಟೂರ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 21
ಹೂವುಗಳಿಲ್ಲದೆ ಯಾವುದೇ ಮಂಗಲ ಕಾರ್ಯಗಳು ಜರುಗುವುದಿಲ್ಲ. ಮದುವೆ ಮುಂಜಿವೆ, ಗೃಹ ಪ್ರವೇಶ ಹೀಗೆ ಅನೇಕ ಶುಭ ಕಾರ್ಯಗಳಲ್ಲಿ ಮಲ್ಲಿಗೆಯ ಹೂವು ಬೇಕೇ ಬೇಕು. ಅದರಲ್ಲೂ ಮಲ್ಲಿಗೆ ಹೂವು ಹೂವುಗಳಲ್ಲೇ ವಿಶಿಷ್ಟವಾದ ಪರಿಮಳ ಸುವಾಸನೆಯ ಮೂಲಕ ಎಲ್ಲರ ಮನಸ್ಸನ್ನು ಹೂವಾಗಿಸುತ್ತದೆ.
ಇಂಥ ಮಲ್ಲಿಗೆಯನ್ನು ಬೆಳೆದು ಲಕ್ಷಾಂತರ ಹಣ ಲಾಭ ಗಳಿಸಿ ನೆಮ್ಮದಿಯ ಬದುಕು ಕಂಡವರು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಸೂರಣಿಗಿ ಗ್ರಾಮದ ರೈತ ಅನ್ವರ್‌ಸಾಬ ಗೋವನಾಳ ಹಾಗೂ ಬಾಬುಸಾಬ ಗೋವನಾಳ.
ಮಲ್ಲಿಗೆ ಹೂವಿನಲ್ಲಿ ಹಲವು ಪ್ರಭೇದಗಳಿದ್ದು, ಅವುಗಳಲ್ಲಿ ಸೂಜಿ ಮಲ್ಲಿಗೆ, ದುಂಡು ಮಲ್ಲಿಗೆ, ಕಾಕಾಡಾ ಮಲ್ಲಿಗೆ ಹೀಗೆ ಅನೇಕ ತರಹಗಳಿದ್ದರೂ ಮೈಸೂರು ಮಲ್ಲಿಗೆ ವಿಶ್ವ ವಿಖ್ಯಾತಿ ಪಡೆದುಕೊಂಡಿದೆ. ಬೋರ್‌ವೆಲ್ ನೀರಾವರಿಯಿಂದ ಸುಮಾರು ಒಂದು ಎಕರೆ ಹೊಲದಲ್ಲಿ ದುಂಡು ಮಲ್ಲಿಗೆಯ ಬಳ್ಳಿಗಳನ್ನು ನಾಟಿ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಬಳ್ಳಿಯನ್ನು ನಾಟಿ ಮಾಡಿದ ಮೇಲೆ ಸುಮಾರು 6-7 ತಿಂಗಳಲ್ಲಿ ಮಲ್ಲಿಗೆಯ ಬಳ್ಳಿಗಳು ಹೂವುಗಳು ಬಿಡಲು ಪ್ರಾರಂಭಿಸುತ್ತವೆ. ವರ್ಷಕ್ಕೆ 2 ಬಾರಿ ಮಾತ್ರ ದುಂಡು ಮಲ್ಲಿಗೆ ಬಳ್ಳಿಗಳು ಹೂವು ಬಿಡುತ್ತವೆ. ಮೊದಲು ಅಕ್ಟೋಬರ್ ಮತ್ತು ಸೆಪ್ಟೆಂಬರ್‌ನಲ್ಲಿ ನಂತರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೂವುಗಳು ಅರಳಲು ಪ್ರಾರಂಭಿಸುವ ದಿನಗಳಾಗಿವೆ. ಅಕ್ಟೋಬರ್ ಮತ್ತು ಸೆಪ್ಟೆಂಬರ್‌ನಲ್ಲಿ ಅಷ್ಟೇನೂ ದೊಡ್ಡ ಪ್ರಮಾಣದಲ್ಲಿ ಹೂವುಗಳು ಅರಳುವುದಿಲ್ಲ. ಆದರೆ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರತಿದಿನ ಒಂದು ಎಕರೆ ಹೊಲದಿಂದ 35ರಿಂದ 50 ಕೆಜಿಯ ವರೆಗೆ ಮಲ್ಲಿಗೆಯ ಮೊಗ್ಗುಗಳು ಬರುತ್ತವೆ. ಮಲ್ಲಿಗೆಯ ಹೂವುಗಳು ಅರಳುವ ಮೊದಲೇ ಅಂದರೆ ಮೊಗ್ಗುಗಳಿರುವಾಗಲೇ ಅವುಗಳನ್ನು ಬಳ್ಳಿಯಿಂದ ಕಿತ್ತು ಪ್ಯಾಕ್ ಮಾಡಿ ಮಾರುಕಟ್ಟೆಗೆ ಸಾಗಾಟ ಮಾಡಲಾಗುತ್ತದೆ.
ಹಲವು ಜಿಲ್ಲೆಗಳಿಗೆ ಮಾರಾಟ: ಬಳ್ಳಿಗಳಿಂದ ಕಿತ್ತ ಮೊಗ್ಗುಗಳನ್ನು ಗೋಣಿ ಚೀಲಗಳಲ್ಲಿ ಪ್ಯಾಕ್ ಮಾಡಿ ಬೆಳಗಾವಿ, ಹುಬ್ಬಳ್ಳಿ, ಗದಗ, ಹಾವೇರಿ ಮತ್ತು ಲಕ್ಷ್ಮೇಶ್ವರದ ಹೂವಿನ ಮಾರುಕಟ್ಟೆಗಳಿಗೆ ಬಸ್‌ಗಳ ಮೂಲಕ ತಲುಪಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಮಲ್ಲಿಗೆಯ ಮೊಗ್ಗುಗಳಿಗೆ ರು. 200-500  ವರೆಗೆ ಬೆಲೆ ಸಿಗುತ್ತದೆ. ಮದುವೆ ಮತ್ತಿತರ ಸಂದರ್ಭಗಳಲ್ಲಿ ಇದರ ಬೆಲೆ ಇನ್ನೂ ಹೆಚ್ಚಾಗುತ್ತದೆ. ಮದುವೆಗಳು ಇಲ್ಲವಾದಲ್ಲಿ ಬೆಲೆ ಕುಸಿತ ಕಾಣುವುದು ಮಾಮೂಲಿ. ಇದರಿಂದ ಲಾಭ ಕಡಿಮೆಯಾಗುವುದು ಉಂಟು ಎನ್ನುತ್ತಾರೆ ಕೃಷಿಕರು.
ಪ್ರತಿ ಎಕರೆಗೆ ರು. 2-3 ಲಕ್ಷ ಲಾಭ: ಮಲ್ಲಿಗೆಯ ಮೊಗ್ಗುಗಳನ್ನು ಬಳ್ಳಿಗಳಿಂದ ಕೀಳಲು ಸುಮಾರು ಪ್ರತಿ ದಿನ 15-20 ಆಳುಗಳು ಬೇಕಾಗುತ್ತವೆ. ಆಳುಗಳಿಗೆ ರು. 80-100 ರ ವರೆಗೆ ಕೂಲಿ ನೀಡಲಾಗುತ್ತದೆ. ಮಲ್ಲಿಗೆಯ ಹೂವಿನ ಬಳ್ಳಿಗಳಿಗೂ ಆಗಾಗ ಬರುವ ಎಲೆ ಮುರುಟು ರೋಗ, ಮೊಗ್ಗು ಉದುರುವುದು ಮುಂತಾದ ರೋಗಗಳಿಗೆ ಔಷಧಿಯನ್ನು ಸಿಂಪರಣೆ ಮಾಡಬೇಕಾಗುತ್ತದೆ. ಹೀಗೆ ಕೂಲಿ ಇತರೆ ಖರ್ಚು ವೆಚ್ಚಗಳನ್ನು ತೆಗೆದು ಪ್ರತಿ ವರ್ಷ ಎಕರೆಗೆ ರು. 2-3 ಲಕ್ಷ ಲಾಭ ನೀಡುತ್ತದೆ. ಮಲ್ಲಿಗೆ ನಮ್ಮ ಬಾಳಿಗೆ ಸುಗಂಧ ಹಾಗೂ ಲಾಭವನ್ನು ನೀಡಿದೆ ಎಂದು ಬಾಬುಸಾಬ ಗೋವನಾಳ ಹೇಳುತ್ತಾರೆ. ಕೃಷಿಯಿಂದಲೂ ಲಾಭ ಗಳಿಸಿಕೊಂಡು ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ ಎನ್ನುವುದನ್ನು ರೈತರು ಅರಿಯಬೇಕಾಗಿದೆ.



ದೇಶಕ್ಕೆ ಅನ್ನ ಹಾಕುವ ಒಕ್ಕಲುತನ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ನೋವಿನ ಸಂಗತಿ. ಸರ್ಕಾರ ಕೃಷಿಗೆ ಹೆಚ್ಚಿನ ಮಹತ್ವ ನೀಡಬೇಕು. ಕೃಷಿಯನ್ನು ಒಂದು ಉದ್ಯಮವಾಗಿ ಪರಿಗಣಿಸಿ, ರೈತರು ಬೆಳೆದ ಬೆಳೆಗೆ ಮೊದಲೇ ದರ ನಿಗದಿ ಮಾಡಬೇಕು. ತಾವು ಬೆಳೆದ ಬೆಳೆಗೆ ರೈತರೇ ದರ ನಿಗದಿಪಡಿಸುವ ವ್ಯವಸ್ಥೆ ಜಾರಿಗೆ ಬರುವವರೆಗೆ ಕೃಷಿ ಹಿಂದುಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ.
ಅನ್ವರಸಾಬ್ ಗೋವನಾಳ, ಬಾಬುಸಾಬ ಗೋವನಾಳ
(ಮಲ್ಲಿಗೆ ಹೂವು ಬೆಳೆದ ರೈತರು)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement