ಇಂದು ಅಡ್ಡಪಲ್ಲಕ್ಕಿ ಮಹೋತ್ಸವ
ಗದಗ: ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ಬಾಳೆಹೊನ್ನೂರ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಕುಂಭ ಮೆರವಣಿಗೆ, ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಮತ್ತು ಜನಜಾಗೃತಿ ಧರ್ಮ ಸಮ್ಮೇಳನ ಮೇ 23ರ ಬೆಳಗ್ಗೆ 10 ಗಂಟೆಗೆ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಆವರಣದಲ್ಲಿ ನಡೆಯಲಿದೆ. ಸಾನ್ನಿಧ್ಯವನ್ನು ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ವಹಿಸುವರು. ಕಿಲ್ಲಾ ತೊರಗಲ್ಲನ ಚನ್ನಮಲ್ಲ ಶಿವಾಚಾರ್ಯ, ಸೂಡಿಯ ಜುಕ್ತಿ ಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ, ಮುಕ್ತಿಮಂದಿರದ ವಿಮಲರೇಣುಕ ಶಿವಾಚಾರ್ಯ, ಅಡ್ನೂರಿನ ಪಂಚಾಕ್ಷರ ಶಿವಾಚಾರ್ಯ, ನರಗುಂದ ಪತ್ರಿವನಮಠದ ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಹಾಗೂ ನರಗುಂದ ಪಂಚಗ್ರಹ ಗುಡ್ಡದ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು ಉಪಸ್ಥಿತರಿರುವರು. ಅತಿಥಿಗಳಾಗಿ ಬಸವರಾಜ ಹಿರೇಮಠ, ಸದಾಶಿವಯ್ಯ ಬಳಗಾನೂರಮಠ, ಶರಣಯ್ಯನವರು ಕುರ್ಲಗೇರಿ ಹಿರೇಮಠ, ಆಗಮಿಸುವರು. ಇದೇ ಸಮಯದಲ್ಲಿ ಗಣ್ಯರಿಗೆ ಗುರುರಕ್ಷೆ ಸಮಾರಂಭವು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.