ಎತ್ತುಗಳಿಗೆ ಡಿಮ್ಯಾಂಡೋ ಡಿಮ್ಯಾಂಡು...
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಮೇ 22
ಕೆಲವು ದಿನಗಳಿಂದ ಜಿಲ್ಲಾದ್ಯಂತ ಮೋಡಕವಿದ ವಾತಾವರಣ ಪ್ರಾರಂಭವಾಗಿತ್ತು. ಆದರೆ, ಕಳೆದ ಸೋಮವಾರ ಜಿಲ್ಲಾದ್ಯಂತ ಸುರಿದ ಕೃತ್ತಿಕಾ ಮಳೆಯು ರೈತರಲ್ಲಿ ಹೊಸ ಸಂಚಲನವನ್ನುಂಟು ಮಾಡಿದೆ. ವ್ಯವಸಾಯದ ಕೇಂದ್ರ ಬಿಂದು ಆದ ಎತ್ತುಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ.
ಗದಗ ಜಿಲ್ಲೆಯಲ್ಲಿ ಬೇಸಿಗೆಯ ತೀವ್ರತೆ ಎಷ್ಟಿದೆ ಎಂದರೆ ಸಾರ್ವಜನಿಕರು ಹೊರ ಹೋಗದ ಸ್ಥಿತಿ ನಿರ್ಮಾಣವಾಗಿತ್ತು. ಸತತ ಬರಗಾಲದಿಂದ ತತ್ತರಿಸಿದ್ದ ರೈತರು ಈ ವರ್ಷವೂ ಮಳೆಯೇ ಬರುತ್ತದೆಯೋ ಇಲ್ಲ ಎಂಬ ಅನುಮಾನದಿಂದ ಕೃಷಿ ಚಟುವಟಿಕೆಗೆ ವಿರಾಮ ನೀಡಿದ್ದರು. ಆದರೆ, ರೈತರಿಗೆ ವರವಾಗುವಂತೆ ಸುರಿದ ಕೃತ್ತಿಕಾ ಮಳೆಯು ರೈತರ ಮೊಗದಲ್ಲಿ ಹೊಸ ಸಂಚಲನ ಮೂಡಿಸಿದ್ದಲ್ಲದೇ ಹೊಸ ಹುರುಪನ್ನು ನೀಡಿದೆ. ಈಗ ಜಿಲ್ಲಾದ್ಯಂತ ರೈತರು ಕೃಷಿ ಚಟುವಟಿಕೆಗಳಲ್ಲಿ ಮಗ್ನರಾಗಿದ್ದಾರೆ.
ಎತ್ತುಗಳಿಗೆ ಎಲ್ಲಿಲ್ಲದ ಬೇಡಿಕೆ: ಕೆಲವು ತಿಂಗಳುಗಳ ಹಿಂದೆ ರೈತರ ಜೀವನಾಡಿ ಎತ್ತುಗಳನ್ನು ಕೇಳುವವರಿಲ್ಲದಂತಾಗಿತ್ತು. ಆಗ ಬಂದೊದಗಿದ ಬರಗಾಲದಿಂದ ಎತ್ತುಗಳಿಗೆ ಆಹಾರವಿಲ್ಲದೇ ಜಿಲ್ಲೆಯ ಬಹುತೇಕ ರೈತರು ಎತ್ತುಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿದ್ದರು. ಆದರೆ, ಈಗ ಜಿಲ್ಲಾದ್ಯಂತ ಸುರಿದ ಮಳೆಯಿಂದಾಗಿ ರೈತರು ಮತ್ತೆ ಎತ್ತುಗಳ ಖರೀದಿ ಮಾಡುತ್ತಿದ್ದಾರೆ. ಹಾಗಾಗಿ ಈಗ ಎತ್ತುಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇಂಥ ಸಂದರ್ಭಗಳಲ್ಲಿ ರೈತರು ಒಳ್ಳೆಯ ರಾಸುಗಳಿಗೆ ಡಿಮ್ಯಾಂಡೋ ಡಿಮ್ಯಾಂಡು. ಜಿಲ್ಲೆ ಸೇರಿದಂತೆ ಗದಗ ನಗರ ಸೇರಿದಂತೆ ನರಗುಂದ, ರೋಣ, ಶಿರಹಟ್ಟಿ, ಲಕ್ಷ್ಮೇಶ್ವರ, ನರೇಗಲ್ಲ, ಗಜೇಂದ್ರಗಡ, ಮುಂಡರಗಿ ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಎತ್ತುಗಳ ಮಾರಾಟ ಬಲು ಜೋರಾಗಿ ನಡೆಯುತ್ತಿದೆ.
ಕಡಿಮೆ ಬೆಲೆಗೆ ಎತ್ತು ಮಾರಾಟ: 2-3 ವರ್ಷಗಳಿಂದ ಜಿಲ್ಲೆಯಲ್ಲಿ ಬರಗಾಲ ತೀವ್ರ ಸ್ವರೂಪದಲ್ಲಿತ್ತು. ಮಳೆಗಾಲದಲ್ಲಿ ಸುರಿದ ಅಲ್ಪ ಮಳೆ ನಂಬಿ ಬಿತ್ತನೆ ಮಾಡಿದ್ದ ಬೀಜ ಮೊಳಕೆ ಕಾಣದಂತೆಯೇ ಹಾಳಾಗಿತ್ತು. ಈ ಬಿತ್ತನೆ ಕಾರ್ಯ ಸೇರಿದಂತೆ ಕೃಷಿ ಚಟುವಟಿಕೆಗಳಲ್ಲಿ ಸಹಪಾಠಿಯಾಗಿದ್ದ ಎತ್ತುಗಳಿಗೆ ಸರಿಯಾದ ಪ್ರಮಾಣದಲ್ಲಿ ಮೇವು ಸಿಗದ ಹಿನ್ನೆಲೆಯಲ್ಲಿ ರೈತರು ತಮ್ಮ ಎತ್ತುಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡಿದ್ದರು.
ಸ್ವಗ್ರಾಮದತ್ತ: ಬರಗಾಲದ ಬವಣೆಗೆ ಸಿಲುಕಿ ದುಡಿಯುವ ಕೈಗಳಿಗೆ ಉದ್ಯೋಗ ಇಲ್ಲದ್ದರಿಂದ ಜಿಲ್ಲೆಯ ಜನರು ಗೋವಾ, ಮಂಗಳೂರು, ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ಕೆಲಸ ಅರಿಸಿ ಗುಳೆ ಹೋಗಿದ್ದ ಕೃಷಿ ಕೂಲಿ ಕಾರ್ಮಿಕರು ಇದೀಗ ಸ್ವಗ್ರಾಮದತ್ತ ಮುಖ ಮಾಡುತ್ತಿದ್ದಾರೆ. ಈ ಬಾರಿ ಮುಂಗಾರು ಹಂಗಾಮು ಸಮಯಕ್ಕೆ ಸರಿಯಾಗಿ ಆರಂಭಗೊಳ್ಳುವುದು ಎನ್ನುವ ಹವಾಮಾನ ಇಲಾಖೆಯ ವರದಿ ರೈತಾಪಿ ವರ್ಗದಲ್ಲಿ ನಿರಾಳ ಭಾವನೆ ಮೂಡಿದೆ.
ಎತ್ತಿನ ರೇಟ್ ಕೇಳಿದ್ರ ಎದಿ ಜಲ್ ಅಂತೈತ್ರಿ. ನಾನ್ ಹ್ವಾದ ತಿಂಗ್ಳ ನನ್ನ ಎತ್ತನಾ 18 ಸಾವಿರಕ್ಕ ಮಾರೀನಿ. ಆದ್ರ ಈಗ ಬಂದ ಕೇಳಿದ್ರ 35 ರಿಂದ 40 ಸಾವಿರ ಹೇಳಾಕತ್ತಾರ. ಈಗ ಬ್ಯಾಸಿಗಿ ಕಳ್ದ ಮಳಿ ಚಾಲೋ ಆಗಾಕತೈತಿ. ಹಿಂಗ ಮುಂದ ಆದ್ರ ರೈತ್ರ ಬೆಳ್ದ ಬೆಳಿ ಚಲೋ ಬರತ್ತ ಅನ್ನೋ ಆಸ್ಯಾಗ ಎತ್ತ ಕೊಂಡ್ಕೊಳ್ಳಾಕ ಬಂದೀನ್ರಿ. ಆದ್ರ ಎತ್ತಿನ ರೇಟ್ ಕೇಳದ್ರ ಎತ್ತ ತಗೊಳ್ಳದ ಬ್ಯಾಡ ಅನ್ಸಾಕತೈತಿ.
ಟ ಮಾನಪ್ಪ ಬಡಿಗೇರ, ಕಲ್ಲಪ್ಪ ತುಗ್ಗಲದೋಣಿ, ರೈತರು.