ನೀರಿಗಾಗಿ ರು. 1.55 ಕೋಟಿ ಬಿಡುಗಡೆ: ಎಚ್ಕೆ
ಕನ್ನಡಪ್ರಭ ವಾರ್ತೆ, ಗದಗ, ಮೇ 23
ಜಿಲ್ಲೆಯಲ್ಲಿ ತೀವ್ರವಾದ ಕುಡಿವ ನೀರಿನ ಸಮಸ್ಯೆ ಉಂಟಾಗಿದ್ದು, ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ರು. 1.55 ಕೋಟಿ ಎಸ್ಎಫ್ಸಿ ಅನುದಾನದಡಿ ಬಿಡುಗಡೆ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಅವರು ಗುರುವಾರ ರಾತ್ರಿ ನಗರದ ಜಿಪಂ ಸಭಾಭವನದಲ್ಲಿ ಕುಡಿವ ನೀರಿನ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಗದಗ ನಗರ ಸಭೆಗೆ ರು. 45 ಲಕ್ಷ, ಲಕ್ಷ್ಮೇಶ್ವರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ರು. 25 ಲಕ್ಷ, ಮುಳಗುಂದ, ನರೇಗಲ್ಲ, ಶಿರಹಟ್ಟಿ ಪಟ್ಟಣ ಪಂಚಾಯ್ತಿಗಳಿಗೆ ರು. 10 ಲಕ್ಷ, ರೋಣ ಪುರಸಭೆಗೆ 15 ಲಕ್ಷ ಹಾಗೂ ನರಗುಂದ, ಮುಂಡರಗಿ ಮತ್ತು ಗಜೇಂದ್ರಗಡ ಪುರಸಭೆಗೆ ರು. 15 ಲಕ್ಷ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಲಕ್ಷ್ಮೇಶ್ವರ, ನರಗುಂದ ಹಾಗೂ ಶಿರಹಟ್ಟಿ ಪಟ್ಟಣಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ತಕ್ಷಣವೇ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಅಗತ್ಯವಿರುವೆಡೆ ತಕ್ಷಣದಿಂದಲೇ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಗದಗ, ಬೆಟಗೇರಿ ಅವಳಿ ನಗರದಲ್ಲಿನ 10 ಓವರ್ ಹೆಡ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಲಾಗಿದ್ದು, ಮೇ 24ರ ಶುಕ್ರವಾರದಿಂದ ಅವಳಿ ನಗರದ ಎಲ್ಲ ವಾರ್ಡ್ಗಳಲ್ಲಿಯೂ ಓವರ್ ಹೆಡ್ ಟ್ಯಾಂಕ್ಗಳಲ್ಲಿ ಸಂಗ್ರಹಿಸಿರುವ ನೀರಿನ ಮೂಲಕವೇ ಪೂರೈಕೆ ಮಾಡಲಾಗುವುದು. ಕುಡಿವ ನೀರಿನ ಕುರಿತು ಅವಳಿ ನಗರದಲ್ಲಿನ ನೀರು ವಿತರಣಾ ಸಮಸ್ಯೆಗಳಲ್ಲಿನ ಇತ್ಯರ್ಥಪಡಿಸಲು ಈಗಾಗಲೇ ಉಪವಿಭಾಗಾಧಿಕಾರಿಗಳ ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ. ನಾಳೆಯಿಂದ ಜಿಲ್ಲಾಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ನರಗುಂದ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಕೆರೆಯಲ್ಲಿನ ನೀರು ಸಂಗ್ರಹ ಕಡಿಮೆ ಇದ್ದು, ತಕ್ಷಣವೇ ಮಲಪ್ರಭಾ ಡ್ಯಾಂನಿಂದ ನೀರು ಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಬೆಟಗೇರಿ ಭಾಗದಲ್ಲಿನ ಆಸ್ಪತ್ರೆಯ ವಿಷಯವಾಗಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ತಕ್ಷಣವೇ ಅಲ್ಲಿಗೆ ವೈದ್ಯರ ನೇಮಿಸಿ, ಸಾರ್ವಜನಿಕರ ಸಮಸ್ಯೆಗೆ ಮುಕ್ತಿ ಹಾಡಲಾಗುವುದು ಎಂದರು. ಜಿಪಂ ಸಿಇಓ ವೀರಣ್ಣ ತರಮರಿ ಮುಂತಾದವರು ಹಾಜರಿದ್ದರು.