ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಉದ್ಯಮ ಸ್ಥಾಪಿಸಲು ಮಹಿಳೆಯರಿಗೆ ಆಹ್ವಾನ

Mainashree
Updated On : 25 May 2013, 10:38 am

ಗದಗ: ಮಹಿಳೆಯರು ಸ್ವಾವಲಂಬಿಯಾಗಿ ಉದ್ಯಮಗಳನ್ನು ಪ್ರಾರಂಭಿಸಲು ಶಕ್ತಿಯಾಗಿ ನಿಂತಿರುವ ಅವೇಕ್ ಕರ್ನಾಟಕ ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆಯಿಂದ ಸಮರ್ಪಕವಾಗಿ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಉದ್ಯಮಗಳನ್ನು ಸ್ಥಾಪಿಸಲು ಮಹಿಳೆಯರು ಮುಂದೆ ಬರಬೇಕು ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಶಿರೂರ ಹೇಳಿದರು.
ಈಚೆಗೆ ಅವರು ಸ್ಥಳೀಯ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ರಾಜ್ಯ ಮಹಿಳಾ ಉದ್ಯಮಗಳ ಸಂಸ್ಥೆ (ಅವೇಕ್) ಬೆಂಗಳೂರು ಇದರ ಪ್ರಾಯೋಜಕತ್ವ ವಹಿಸಿದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಗದಗ ಇವರು ಏರ್ಪಡಿಸಿರುವ ಉದ್ಯಮ ಶೀಲತಾ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರವು ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸುವ ಮೂಲಕ ಅವರು ಸಹ ಪುರುಷರಷ್ಟೇ ಸಮಾನವಾಗಿ ಸ್ವತಂತ್ರವಾಗಿ ಉದ್ಯಮಗಳನ್ನು ಪ್ರಾರಂಭಿಸಬೇಕು ಎಂಬ ಉದ್ದೇಶದಿಂದಾಗಿ ಅವೇಕ್ ಸಂಸ್ಥೆಯು ನುರಿತ ಅನುಭವಿಕ ತಜ್ಞರ ಮೂಲಕ 12 ದಿನಗಳ ಕಾಲ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ತರಬೇತಿಯನ್ನು ನೀಡುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸೂಚಿಸಿದರು.  ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಐ. ಕುಂಬಾರ ಮಾತನಾಡಿ, ಸರ್ಕಾರವು ಶೇ. 50ರಷ್ಟು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಜನವರಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಅವರಿಗೆ ಉದ್ಯಮಗಳ ಬಗ್ಗೆ ತಿಳುವಳಿಕೆ ಹಾಗೂ ತರಬೇತಿ ನೀಡುವ ಉದ್ದೇಶವನ್ನು ಹೊಂದಿದ್ದು, ಈಗಾಗಲೇ ನರಸಾಪುರದಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ 120 ಎಕರೆ ಜಾಗೆಯಲ್ಲಿ 149 ಪ್ಲಾಟುಗಳಿದ್ದು, ಕೈಗಾರಿಕೆಗಳ ಸ್ಥಾಪನೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಉದ್ಯಮಗಳಿಗೆ ಹಂಚಿಕೆ ಮಾಡಲಾಗಿದೆ. ಇನ್ನು ಕೆಐಡಿಬಿಎಯಿಂದ 500 ಎಕರೆ ಜಮೀನಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪ್ರಸ್ತಾಪನೆಯನ್ನು ಸಹ ಸಲ್ಲಿಸಲಾಗಿದೆ. ಕಾರಣ ತಾವು ತರಬೇತಿ ಪಡೆದ ನಂತರ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಭೇಟಿ ನೀಡಿ ಸರ್ಕಾರದಿಂದ ಮತ್ತು ಇತರ ಸಂಸ್ಥೆಗಳಿಂದ ಸಹಾಯ ಸೌಲಭ್ಯವನ್ನು ಪಡೆದುಕೊಂಡು ಉದ್ಯಮ ಪ್ರಾರಂಭಿಸಲು ಮುಂದಾಗಬೇಕೆಂದು ತಿಳಿಸಿದರು. ಅವೇಕ್ ಸಂಸ್ಥೆಯ ಕಾರ್ಯಕ್ರಮಗಳ ಸಂಯೋಜನಾಧಿಕಾರಿ ಶೋಭಾ ಸಂಸ್ಥೆಯ ಸಂಶೋಧನೆಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಅವೇಕ್ ಸಂಸ್ಥೆಯ ಜಿಲ್ಲಾ ಪ್ರತಿನಿಧಿ ವಂದನಾ ಪುರಾಣಿಕ ಮಾತನಾಡಿದರು. ಲೀಲಾ ದೇವಾನಂದ್ ಪ್ರಾರ್ಥಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯ ಜಂಟಿ ನಿರ್ದೇಶಕ ಸಿ.ಪಿ. ಮಾಡಳ್ಳಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement