ಎಲ್ಲರ ಚಿತ್ತ ಸ್ಥಳೀಯ ಸಂಸ್ಥೆ ಮೀಸಲಾತಿಯತ್ತ
ಕನ್ನಡಪ್ರಭ ವಾರ್ತೆ, ಗದಗ, ಮೇ 24
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶವು ಮಾ 11 ರಂದು ಹೊರಬಿದ್ದಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗುವ ಪೂರ್ವದಲ್ಲಿಯೇ ವಿಧಾನಸಭೆಯ ಚುನಾವಣೆ ಘೋಷಣೆಯಾಗಿದ್ದರಿಂದ ಮೀಸಲಾತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಈಗ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಚಿತ್ತ ಮತ್ತೆ ಮೀಸಲಾತಿಯತ್ತ ನೆಟ್ಟಿದೆ.
2008ರ ಚುನಾವಣೆಯಲ್ಲಿ ಸೋಲನುಭವಿಸಿದ್ದ ಕಾಂಗ್ರೆಸ್ ಈಚೆಗೆ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ತನ್ನ ಸೇಡು ತೀರಿಸಿಕೊಂಡಿದೆ. ವಿಧಾನಸಭಾ ಚುನಾವಣೆಯ ಮೊದಲೇ ನಡೆಯಬೇಕಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಇಲ್ಲಿಯವರೆಗೂ ಮುಂದೂಡುತ್ತಾ ಬರಲಾಗುತ್ತಿದೆ. ಅಲ್ಲದೆ ಈ ಬಾರಿ ಕಾಂಗ್ರೆಸ್ ಜಿಲ್ಲೆಯಾದ್ಯಂತ ತನ್ನ ಪ್ರಭಾವ ತೋರಿಸಿದ್ದು, ಹಾಗಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಆಯ್ಕೆಯಾದ ಕಾಂಗ್ರೆಸ್ ಸದಸ್ಯರು ತಮಗೆ ಅಧ್ಯಕ್ಷ ಸ್ಥಾನ ದೊರೆಯಲಿದೆ ಎಂಬ ಹೊಸ ಹುರುಪಿನಲ್ಲಿದ್ದಾರೆ.
ಕಾಂಗ್ರೆಸ್ ಪ್ರಾಬಲ್ಯ ಹೆಚ್ಚು: ಗದಗ ಜಿಲ್ಲೆಯಲ್ಲಿ ಹೆಚ್ಚಾಗಿ ಕಾಂಗ್ರೆಸ್ ಪಕ್ಷವು ತನ್ನ ಪ್ರಾಬಲ್ಯ ಹೊಂದಿದ್ದು, ಗದಗ-ಬೆಟಗೇರಿ ನಗರಸಭೆ, ಮುಂಡರಗಿ, ರೋಣ ಪುರಸಭೆ, ಮುಳಗುಂದ ಪಟ್ಟಣ ಪಂಚಾಯತ್‌ನಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ. ಗಜೇಂದ್ರಗಡ, ನರಗುಂದ ಪುರಸಭೆಯಲ್ಲಿ ಮಾತ್ರ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ.
ಶಿರಹಟ್ಟಿಯ ಪಪಂನಲ್ಲಿ 17 ವಾರ್ಡ್‌ಗಳಿದ್ದು, ಇದರಲ್ಲಿ ಜೆಡಿಎಸ್ 7 ಸ್ಥಾನಗಳನ್ನು ಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಅಧಿಕಾರದ ಗದ್ದುಗೆ ಹಿಡಿಯಲು ಇನ್ನೂ 2 ಸ್ಥಾನಗಳು ಬೇಕಾಗಿದ್ದು, ಹಾಗಾಗಿ ಅನ್ಯ ಪಕ್ಷದ ಇಲ್ಲವೇ ಪಕ್ಷೇತರರನ್ನು ತಮ್ಮತ್ತ ವಾಲಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ. ಲಕ್ಷ್ಮೇಶ್ವರ ಪುರಸಭೆಯಲ್ಲಿ 23 ಸದಸ್ಯರಿದ್ದು, ಅವರಲ್ಲಿ ಕಾಂಗ್ರೆಸ್ 10 ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆಯಾದರೂ ಬಹುಮತ ಹೊಂದಲು ಇನ್ನೂ 3 ಸ್ಥಾನಗಳು ಬೇಕು.
ನರೇಗಲ್ಲ ಅತಂತ್ರ: ನರೇಗಲ್ಲ ಪಪಂನ 17 ಸ್ಥಾನಗಳಲ್ಲಿ ಬಿಜೆಪಿ 8, ಕಾಂಗ್ರೆಸ್ 6, ಕೆಜೆಪಿ ಓರ್ವ ಹಾಗೂ ಪಕ್ಷೇತರ ಇಬ್ಬರು ಆಯ್ಕೆಯಾಗಿದ್ದಾರೆ. ಇದರಿಂದ ಬಿಜೆಪಿ ವಲಯದಲ್ಲಿ ಗೊಂದಲದ ವಾತಾವರಣ ಉಂಟಾಗಿರುವುದಂತೂ ನಿಜ. ವಿಜೇತರಾಗಿರುವ ಸದಸ್ಯರಲ್ಲಿ ಬಿಜೆಪಿಯು ಕನಿಷ್ಟ 2 ಸ್ಥಾನಗಳನ್ನಾದರೂ ತನ್ನತ್ತ ಸೆಳೆದುಕೊಳ್ಳಬೇಕಿದೆ. ಇಲ್ಲವೆ ಕಾಂಗ್ರೆಸ್ ಪಕ್ಷವು ಪಡೆದಿರುವ 6 ಜನರೊಂದಿಗೆ ಪಕ್ಷೇತರರಿಬ್ಬರು ಹಾಗೂ ಕೆಜೆಪಿಯ ಓರ್ವ ಸದಸ್ಯನನ್ನು ತನ್ನತ್ತ ವಾಲಿಸಿಕೊಂಡಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯುವ ಅವಕಾಶವಿದೆ. ಒಟ್ಟಾರೆ ನರೇಗಲ್ಲ ಪಪಂ ಅತಂತ್ರ ಸ್ಥಿತಿಯಲ್ಲಿದ್ದು, ಅಧಿಕಾರದ ಗದ್ದುಗೆ ಯಾರು ಹಿಡಿಯುವರು ಎಂಬುದನ್ನು ಕಾದುನೋಡಬೇಕಿದೆ.
ಶಿವಕುಮಾರ ಕುಷ್ಟಗಿ