ನಾಳೆ ಎಂಜಿಎಂ ಆಸ್ಪತ್ರೆ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಗದಗ, ಮೇ 24
ಗದುಗಿನ ತಜ್ಞ ವೈದ್ಯರ ತಂಡವೊಂದು ಸಮನ್ವಯ ಹೆಲ್ತ್ಕೇರ್ ಪ್ರೈವೇಟ್ ಲಿಮಿಟೆಡ್ ಮೂಲಕ ಮಹಾತ್ಮಗಾಂಧಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ಎಂಜಿಎಂ) ನ್ನು ಸ್ಥಾಪಿಸಿದ್ದು, ಮೇ 26ರಂದು ಶುಭಾರಂಭಗೊಳ್ಳಲಿದೆ ಎಂದು ಡಾ. ಪ್ರಕಾಶ ಧರಣಾ ಹೇಳಿದರು.
ಅವರು ಶುಕ್ರವಾರ ಎಂಜಿಎಂ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗದಗ ಪರಿಸರದಲ್ಲಿ ಎಲ್ಲ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹಾಗೂ ವಿಶೇಷತೆಗಳನ್ನು ಒಳಗೊಂಡ ಈ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯನ್ನು ನಗರದ ಮುಂಡರಗಿ ರಸ್ತೆಯ ನೂತನ ಬಸ್ ನಿಲ್ದಾಣದ ಹತ್ತಿರ ನಿರ್ಮಿಸಲಾಗಿದೆ. 100 ಹಾಸಿಗೆಯುಳ್ಳದ್ದಾಗಿದ್ದು, 24 ಗಂಟೆ ತುರ್ತು ಚಿಕಿತ್ಸೆ ಮತ್ತು ಅಪಘಾತ ಚಿಕಿತ್ಸೆ, ತೀವ್ರ ನಿಗಾಘಟಕ (ಐಸಿಯು) ಸೇರಿದಂತೆ ಎಲ್ಲ ವಿವಿಧ ಚಿಕಿತ್ಸೆಗಳು ಆಸ್ಪತ್ರೆಯಲ್ಲಿ ಲಭ್ಯವಿವೆ ಎಂದರು.
ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು, ಶಿವಾನಂದ ಬೃಹನ್ಮಠದ ಜ. ಅಭಿನವ ಶಿವಾನಂದ ಶ್ರೀಗಳು, ಕೊಪ್ಪಳ ಗವಿಮಠ ಸಂಸ್ಥಾನದ ಅಭಿನವ ಗವಿಸಿದ್ದೇಶ್ವರ ಶ್ರೀಗಳು, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸುವರು. ಉಪನ್ಯಾಸಕರಾಗಿ ಬೆಂಗಳೂರಿನ ಎಚ್.ಸಿ.ಜಿ. ಆಸ್ಪತ್ರೆಯ ಮೆಡಿಕಲ್ ಅಂಕೋಲಾಜಿಸ್ಟ್, ಡಾ. ಶೇಖರ ಪಾಟೀಲ ಆಗಮಿಸುವರು.
ಅತಿಥಿಗಳಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಎಚ್.ಕೆ. ಪಾಟೀಲ, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಬಿಎಸ್ಆರ್ ಕಾಂಗ್ರೆಸ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಶಾಸಕ ಬಿ. ಶ್ರೀರಾಮುಲು, ಮಾಜಿ ಸಚಿವ ಸಿ.ಎಂ. ಉದಾಸಿ, ಶಾಸಕ ಜಿ.ಎಸ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಜಿಲ್ಲಾಧಿಕಾರಿ ಎಸ್.ಟಿ. ಅಂಜನಕುಮಾರ, ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಸಿಇಓ ವೀರಣ್ಣ ತುರಮರಿ, ಡಿಎಚ್ಓ ಡಾ. ಡಿ.ಬಿ. ಚೆನ್ನಶೆಟ್ಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಆರ್.ಎನ್. ಪಾಟೀಲ ಆಗಮಿಸಲಿದ್ದಾರೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ಪ್ರಕಾಶ ಸಂಕನೂರ, ವಿಜಯ ನೀಲಗುಂದ, ಅನಿತಾ ಧರಣಾ, ಪೂರ್ಣಿಮಾ ಗಣೇಶ, ಪ್ರದೀಪ ಹಾದಿಮನಿ ಮುಂತಾದವರು ಪಾಲ್ಗೊಂಡಿದ್ದರು.