ಸುದ್ದಿ ಸಂಕ್ಷೇಪ
ಇಂದು ವಿದ್ಯುತ್ ವ್ಯತ್ಯಯ
ಗದಗ: 110 ಕೆವಿ ಡಂಬಳ ಹಾಗೂ ಮುಂಡರಗಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಮೇ 25ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ತ್ರೈಮಾಸಿಕ ವಿದ್ಯುತ್ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಈ ವೇಳೆಯಲ್ಲಿ 110 ಕೆವಿ ಮುಂಡರಗಿ ಹಾಗೂ ಡಂಬಳ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಎಲ್ಲ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಹಾಗೂ 110 ಕೆವಿ ವಿತರಣಾ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 33 ಕೆವಿ ಸಿಂಗಟಾಲೂರು, 110 ಕೆವಿ ಉಪ್ಪಿನ ಬೆಟಗೇರಿ ಹಾಗೂ 110 ಕೆವಿ ಗಂಗಾಪುರ ವಿದ್ಯುತ್ ವಿತರಣಾ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಪ್ರಕಟಣೆ ಗಮನಿಸಿ ಹೆಸ್ಕಾಂನೊಂದಿಗೆ ಸಹಕರಿಸುವಂತೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಸಮಾರೋಪ ಸಮಾರಂಭ
ನರಗುಂದ: ಪಟ್ಟಣದ ಶಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಮಾರೋಪ ಸಮಾರಂಭದ ಕಾರ್ಯಕ್ರಮವು ಮೇ 25ರ ಬೆಳಗ್ಗೆ 9 ಗಂಟೆಗೆ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಜರುಗಲಿದೆ. ಈ ಸಮಾರಂಭದಲ್ಲಿ ಶಾಸಕ ಬಿ.ಆರ್.ಯಾವಗಲ್, ಪ್ರಾ. ಡಾ. ಸಿ.ಎಸ್.ಪಾಟೀಲ, ಡಾ. ನೀಲಾಂಬಿಕಾ ಪಟ್ಟಣಶೆಟ್ಟಿ, ರವಿಕುಮಾರ, ಐ.ಎಸ್. ಸೌದಾಗರ, ಡಾ. ಜಿ.ಎಸ್.ತಳವಾರ, ಡಾ. ಎಂ.ಎಂ.ಹಂಚಿನಾಳ, ಜೆ.ಎಚ್.ಜಾಗೀರದಾರ ಮುಂತಾದವರು ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.
ಇಂದು ಶಿವಾನುಭವ ಗೋಷ್ಠಿ
ಗದಗ: ತಾಲೂಕಿನ ಬಳಗಾನೂರ ಗ್ರಾಮದ ಚಿಕೇನಕೊಪ್ಪದ ಚನ್ನವೀರ ಶರಣರ ಮಠದಲ್ಲಿ 392ನೇ ಶಿವಾನುಭವ ಗೋಷ್ಠಿಯನ್ನು ಮೇ 25ರ ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಶ್ರೀಮಠದ ಶಿವಶಾಂತವೀರ ಶ್ರೀಗಳು ವಹಿಸುವರು. ಕೀರ್ತನ ಕೇಸರಿ ಗುರುಲಿಂಗಯ್ಯ ಶಾಸ್ತ್ರೀಗಳಿಂದ ಪ್ರವಚನ ಕಾರ್ಯಕ್ರಮ ಜರುಗಲಿದೆ. ಹಾಗೂ ಶಿದ್ದಪ್ಪ ವಗ್ಗನವರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದ್ದು, ತಬಲಾ ಸಾಥ್ನ್ನು ಲೋಕೇಶ ಇಬ್ರಾಹಿಂಪುರ ನೀಡುವರು ಎಂದು ಶಿವಾನುಭವ ಸಮಿತಿಯ ಪ್ರಕಟಣೆ ತಿಳಿಸಿದೆ.
ಇಂದು ಬುದ್ಧ ಪೂರ್ಣಿಮಾ
ಗದಗ: ನಗರದ ವಾರ್ಡ್ ನಂ 21ನ ಸಂಜಯಗಾಂಧಿ ಲೇಪ್ರೋಸಿ (ಕುಷ್ಠರೋಗ) ಕಾಲೋನಿಯಲ್ಲಿ ರಾಜರಾಜೇಶ್ವರಿ ಮಹಿಳಾ ಸಂಘದ ಆಶ್ರಯದಲ್ಲಿ ಮೇ 25ರ ಬೆಳಗ್ಗೆ 8.45 ಗಂಟೆಗೆ ಬುದ್ಧಪೂರ್ಣಿಮಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ನಗರಸಭೆ ಸದಸ್ಯೆ ಕಮಲಾ ಹಾದಿಮನಿ ನೆರವೇರಿಸುವರು. ಉಪನ್ಯಾಸಕರಾಗಿ ಸಾಹಿತಿ ಮಂಜುಳಾ ವೆಂಕಟೇಶಯ್ಯ ಆಗಮಿಸುವರು. ಅತಿಥಿಗಳಾಗಿ ಗದಗನ ಉಪಕಾರಾಗೃಹದ ಅಧೀಕ್ಷಕಿ ಎಂ.ಎಂ. ಮರಕಟ್ಟಿ, ನಗರಸಭೆ ಸದಸ್ಯೆ ಶಿವಲೀಲಾ ಅಕ್ಕಿ, ಮೇಘಾ ಮುದಗಲ್ಲ ಮುಂತಾದವರು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ವೆಂಕಟೇಶಯ್ಯ ಹಾಗೂ ಸಂಗಡಿಗರಿಂದ ಬುದ್ಧ ವಂದನೆ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಸಾರ್ವಜನಿಕ ಕುಂದುಕೊರತೆ ಸಭೆ
ಗದಗ: ಸಾರ್ವಜನಿಕ ಕುಂದುಕೊರತೆಗಳ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ಸರ್ಕಾರದ ಆಹಾರ ಭದ್ರತೆ ಯೋಜನೆಯಡಿ ಸಾರ್ವಜನಿಕ ವಿತರಣಾ ಪದ್ಧತಿ, ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ ಹಾಗೂ ಮಧ್ಯಾಹ್ನದ ಬಿಸಿ ಊಟ ವಿಷಯಗಳ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೇ 25 ರಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಬೆಳಗ್ಗೆ 10.30 ಗಂಟೆಗೆ ಸಭೆ ಜರುಗಿಸಲಾಗುವುದು. ಪ್ರತಿ ತಿಂಗಳ ಶನಿವಾರರಂದು ದೂರು ಸ್ವೀಕರಿಸಿ ವಿಚಾರಣೆ ನಡೆಸಲಾಗುವುದು. ಆಹಾರ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರುಗಳು ಇದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಿಯಾಯಿತಿ ದರದಲ್ಲಿ ಈರುಳ್ಳಿ ಬೀಜ ವಿತರಣೆ
ಗದಗ: 2013-14ನೇ ಸಾಲಿನ ಮುಂಗಾರು ಹಂಗಾಮಿಗೆ ಉತ್ಕೃಷ್ಟ ಈರುಳ್ಳಿ ತಳಿಯ ಬೀಜಗಳನ್ನು ರಿಯಾಯಿತಿಯಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ರೈತರು ಹಾಗೂ ಅತಿ ಸಣ್ಣ ರೈತರಿಗೆ ಗರಿಷ್ಠ ಒಂದು ಹೆಕ್ಟೇರ್ಗೆ 6 ಕೆಜಿ ಬೀಜ ವಿತರಿಸಲಾಗುವುದು. ಪ್ರತಿ ಕೆಜಿಗೆ ರು. 450 ಬೆಲೆಯಿದ್ದು, ರೈತರು ಕೆಜಿಗೆ ರು. 250 ಪಾವತಿ ಮಾಡಬೇಕಾಗಿರುತ್ತದೆ. ರೈತರು ಮುಂಗಡವಾಗಿ ರೈತರ ವಂತಿಕೆಯನ್ನು ಸಮೀಪದ ತಾಲೂಕಿನ ತೋಟಗಾರಿಕೆ ಕಚೇರಿಯಲ್ಲಿ ಪಾವತಿಸಿ ಸ್ವೀಕೃತಿಯನ್ನು ಪಡೆಯಲು ಸೂಚಿಸಿದೆ. ಬೀಜ ಪೂರೈಸುವ ದಿನಾಂಕವನ್ನು ನಂತರ ಸೂಚಿಸಲಾಗುವುದು. ರೈತರು ಸೂಕ್ತ ದಾಖಲಾತಿಗಳೊಂದಿಗೆ ಸಮೀಪದ ತೋಟಗಾರಿಕೆ ಕಚೇರಿಯನ್ನು ಸಂಪರ್ಕಿಸಲು ಗದಗ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.