ಸಾರಾಯಿ ನಿಷೇಧಕ್ಕೆ ಸಜ್ಜಾದ ಹಮ್ಮಿಗಿ ಗ್ರಾಮ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ. 25
ಇಂದು ರಾಜ್ಯ ಸರ್ಕಾರ ಅಗ್ಗದ ಬೆಲೆಯಲ್ಲಿ ಸಾರಾಯಿ ನೀಡುವ ಯೋಚನೆಯಲ್ಲಿದ್ದರೆ, ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ ಸಾರಾಯಿ ನಿಷೇಧ ಮಾಡುವ ಕುರಿತು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.
14 ವರ್ಷಗಳ ಹಿಂದೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಅನೇಕ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯನಿಯರು ಸಾರಾಯಿ ನಿಷೇಧಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಿದ್ದರು. ಹೋರಾಟದ ಹಿನ್ನೆಲೆಯಲ್ಲಿ ಸುಮಾರು ಒಂದು, ಒಂದೂವರೆ ವರ್ಷಗಳ ಕಾಲ ಗ್ರಾಮದಲ್ಲಿ ಸಾರಾಯಿ ಮಾರಾಟವನ್ನು ನಿಷೇಧಿಸಲಾಗಿತ್ತು. ನಂತರ ಮತ್ತೆ ಯಥಾವತ್ತಾಗಿ ಮಾರಾಟ ನಡೆಯಿತು. ಇದೀಗ ಮೇ 24ರಂದು ಹಮ್ಮಿಗಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ತಾಪಂ ಸದಸ್ಯರ ಸಹಯೋಗದಲ್ಲಿ ಸಭೆ ನಡೆಸಿ ಹಮ್ಮಿಗಿ ಹಾಗೂ ಗುಮ್ಮಗೋಳ ಗ್ರಾಮದಲ್ಲಿ ಸಾರಾಯಿ ನಿಷೇಧಿಸುವಂತೆ ಅನೇಕ ಸ್ವಸಹಾಯ ಸಂಘಗಳ ಸದಸ್ಯರು, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಒತ್ತಾಯಿಸುವ ಮೂಲಕ ಮತ್ತೊಂದು ಸಾರಾಯಿ ನಿಷೇಧ ಹೋರಾಟಕ್ಕೆ ಹಮ್ಮಿಗಿ ಗ್ರಾಮಸ್ಥರು ಮುಂದಾಗಿದ್ದಾರೆ.
ಗಂಡಂದಿರನ್ನು ಎತ್ತಿ ಕಟ್ಟಿದ್ದರು: 1999-2000ರಲ್ಲಿ ಹಮ್ಮಿಗಿ ಗ್ರಾಮದಲ್ಲಿ ಸಾರಾಯಿ ಮಾರಾಟವನ್ನು ನಿಷೇಧಿಸಬೇಕೆಂದು ಗ್ರಾಮದ ಮಹಿಳಾ ಸ್ವಸಹಾಯ ಸಂಘಗಳ ನೂರಾರು ಮಹಿಳೆಯರು ಮೊದಲು ಹಮ್ಮಿಗಿ ಗ್ರಾಮದಲ್ಲಿನ ಸಾರಾಯಿ ಮಾರಾಟ ಮಾಡುವ ಎಲ್ಲ ಅಂಗಡಿಗಳಿಗೆ ಬೀಗ ಹಾಕಿಸಿದರು. ನಂತರ ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು. ಅಲ್ಲಿಂದ ಮುಂಡರಗಿಗೆ ತೆರಳಿ ಅಲ್ಲಿನ ತಹಸೀಲ್ದಾರ್ ಕಾರ್ಯಾಲಯದ ಎದುರಿನಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲಿಯೂ ಅವರಿಗೆ ನ್ಯಾಯ ದೊರೆಯದಿದ್ದಾಗ ಅವರು ಗದಗ ಜಿಲ್ಲಾಧಿಕಾರಿ ಕಚೇರಿ ಎದುರಿನಲ್ಲಿ ಅಡುಗೆ ಸಾಮಗ್ರಿಗಳ ಜತೆಗೆ ತೆರಳಿ ಜಿಲ್ಲಾಧಿಕಾರಿ ಕಚೇರಿ ಎದುರಿನಲ್ಲಿ ರೊಟ್ಟಿ ಮಾಡಿಕೊಂಡು ಊಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದರು. ಈ ಮಹಿಳೆಯರ ಪ್ರತಿಭಟನೆಗೆ ಅಂದಿನ ಮುಂಡರಗಿ ಕ್ಷೇತ್ರದ ಶಾಸಕ ಎಸ್.ಎಸ್. ಪಾಟೀಲ ವಿಧಾನಸಭೆಯ ಸದನದಲ್ಲಿ ಪ್ರಸ್ತಾಪ ಮಾಡಿ ಹೋರಾಟ ಮಾಡುತ್ತಿರುವ ಮಹಿಳೆಯರಿಗೆ ನ್ಯಾಯ ಒದಗಿಸುವಂತೆ ಸದನದ ಗಮನ ಸೆಳೆದಿದ್ದರು. ನಂತರ ಮಾರಾಟಗಾರರು ಹೋರಾಟ ನಿರತ ಮಹಿಳೆಯರ ಮೇಲೆ ಅವರ ಗಂಡಂದಿರನ್ನು ಎತ್ತಿಕಟ್ಟಿ ಹೋರಾಟವನ್ನು ಒಡೆಯುವಲ್ಲಿ ಯಶಸ್ವಿಯಾಗಿದ್ದರು ಎನ್ನುವ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿವೆ.
ಸಭೆಯಲ್ಲಿ ನಿರ್ಧಾರ: ಇದೀಗ ಗ್ರಾಮದಲ್ಲಿ ಮತ್ತೆ ಬಾರ್ ಹಾಗೂ ಅಲ್ಲಲ್ಲಿ ಕಿರಾಣಿ ಅಂಗಡಿ, ಹೋಟೆಲ್ಗಳಲ್ಲಿ ಯಾವುದೇ ಹೆದರಿಕೆಯಿಲ್ಲದೇ ಸಾರಾಯಿ ಮಾರಾಟದಲ್ಲಿ ನಿರತರಾಗಿದ್ದು, ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಸಣ್ಣ ಸಣ್ಣ ಮಕ್ಕಳು ದುಶ್ಚಟಗಳ ದಾಸರಾಗುತ್ತಿದ್ದು, ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಗ್ರಾಮದಲ್ಲಿ ಸಂಪೂರ್ಣವಾಗಿ ಸಾರಾಯಿ ಮಾರಾಟ ನಿಷೇಧಿಸುವಂತೆ ಗ್ರಾಪಂ ಅಧ್ಯಕ್ಷರಾಧಿಯಾಗಿ ಎಲ್ಲ ಸದಸ್ಯರು ಹಾಗೂ ಗ್ರಾಮದ ಪ್ರಮುಖರು, ವಿವಿಧ ಸ್ವಸಹಾಯ ಸಂಘಗಳ ಮಹಿಳೆಯರು, ಪುರುಷರು ಹಮ್ಮಿಗಿ ಗ್ರಾಮದ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಸಭೆ ನಡೆಸಿ ಸಾರಾಯಿ ಮಾರಾಟ ನಿಷೇದಿಸುವಂತೆ ಸಭೆಯಲ್ಲಿ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಈಗಾಗಲೇ ಅಬಕಾರಿ ಇಲಾಖೆಗೆ ಸಾರಾಯಿ ನಿಷೇಧಿಸುವಂತೆ ಮನವಿ ನೀಡಲಾಗಿದೆ ಎಂದು ಹಮ್ಮಿಗಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕರಿಯಪ್ಪ ಹಡಗಲಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಒಂದೆಡೆ ಅನೇಕ ಗ್ರಾಮಗಳಲ್ಲಿ ಮಹಿಳೆಯರು ಸಾರಾಯಿ ನಿಷೇಧಿಸುವಂತೆ ನಿತ್ಯ ಹೋರಾಟ, ಪ್ರತಿಭಟನೆಯನ್ನು ನಡೆಸುತ್ತಲೇ ಇದ್ದಾರೆ. ಆದರೆ ಪ್ರಸ್ತುತ ಆಡಳಿತದಲ್ಲಿರುವ ರಾಜ್ಯ ಸರ್ಕಾರದವರು ಕಡಿಮೆ ದರದಲ್ಲಿ ಮದ್ಯ ಸಿಗುವಂತೆ ಮಾಡುತ್ತೇವೆ ಎಂದು ಹೇಳಿಕೆ ನೀಡುತ್ತಾರೆ. ಆದ್ದರಿಂದ ಸಾರಾಯಿ ನಿಷೇಧ ಹೋರಾಟಗಾರರ ಕನಸು ಏನಾಗುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
-ಶರಣು ಸೊಲಗಿ