ಸಿಬಿಎಸ್‌ಸಿ ಶಾಲೆ ಪ್ರಾರಂಭಿಸದಿದ್ದರೆ ಪ್ರತಿಭಟನೆ
ಗಜೇಂದ್ರಗಡ: ಬರುವ ಶೈಕ್ಷಣಿಕ ವರ್ಷದಿಂದ ಬೈರಾಪುರ ಗುಡ್ಡದಲ್ಲಿ ವಾಜಪೇಯಿ ಮಾದರಿ ವಸತಿ ಆಂಗ್ಲ ಮಾಧ್ಯಮ (ಸಿಬಿಎಸ್‌ಸಿ) ಶಾಲೆ ಪ್ರಾರಂಭಗೊಳ್ಳಲು ಶಾಸಕ ಜಿ.ಎಸ್. ಪಾಟೀಲ ಅಡ್ಡಗಾಲು ಹಾಕಿದರೆ ಜನರ ಜತೆಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಎಚ್ಚರಿಸಿದರು.
ಅವರು ಶನಿವಾರ ಸಂಜೆ ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವಸತಿ ಶಾಲೆ ಕಟ್ಟಡಕ್ಕೆ ರು. 10 ಮಂಜೂರಾಗಿದೆ. ಗಜೇಂದ್ರಗಡಕ್ಕೆ ಮಂಜೂರಾದ ನೂತನ ವಾಜಪೇಯಿ ಮಾದರಿ ವಸತಿ ಶಾಲೆಯನ್ನು ರೋಣಕ್ಕೆ ಸ್ಥಳಾಂತರಿಸಲು ಶಾಸಕ ಜಿ.ಎಸ್.ಪಾಟೀಲ ಹುನ್ನಾರ ನಡೆಸಿದ್ದು, ಈ ದುಸ್ಸಾಹಸ ಕೈಬಿಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಈ ವಸತಿ ಶಾಲೆ ಸ್ಥಳಾಂತರಿಸುವ ಬಗ್ಗೆ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ 12 ವಾಜಪೇಯಿ ಮಾದರಿ ಶಾಲೆ ಬಿಡುಗಡೆಯಾಗಿವೆ. ಅದರಲ್ಲಿ ಬೈರಾಪುರ ಗುಡ್ಡದ ಮೇಲೊಂದು ಬಿಡುಗಡೆಯಾಗಿದೆ. ಮತಕ್ಷೇತ್ರದ ಜನತೆ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಗಜೇಂದ್ರಗಡಕ್ಕೆ ಮಂಜೂರಾದ ವಾಜಪೇಯಿ ಮಾದರಿ ವಸತಿ ಆಂಗ್ಲ ಮಾಧ್ಯಮ ಶಾಲೆಯನ್ನು ತಮ್ಮೂರಿಗೆ ಸ್ಥಳಾಂತರಿಸುವ ಬದಲು ರೋಣದಲ್ಲಿ ಮತ್ತೊಂದು ಅಂತಹ ಶಾಲೆ ತೆರೆಯಲು ಮುಂದಾಗಬೇಕು. ಇದರಿಂದ ಎಲ್ಲರಿಗೂ ಅನಕೂಲವಾಗುವುದು ಎಂದರು.
ಸಚಿವರ ಹೇಳಿಕೆಗೆ ಖಂಡನೆ: ಕಂದಾಯ ಸಚಿವ ಶ್ರೀನಿವಾಸ ಪ್ರಸಾದ ಹೊಸ ತಾಲೂಕಗಳ ರಚನೆ ಕುರಿತು ನೀಡಿರುವ ಹೇಳಿಕೆ ಖಂಡನೀಯ. ಸಣ್ಣ ಸಣ್ಣ ತಾಲೂಕುಗಳ ರಚನೆಯಿಂದ ಜನತೆಗೆ ಸರ್ಕಾರಿ ಸೇವೆಗಳು ಹತ್ತಿರವಾಗಲಿವೆ. ಈ ಹಿನ್ನೆಲೆಯಿಂದ ಹಲವಾರು ವರ್ಷದಿಂದ ಹೋರಾಟ ಮಾಡುತ್ತಾ ಬಂದಿರುವ ಜನರ ಬೇಡಿಕೆ ಈಡೇರಿಸಲಾಗಿದೆ. ಹೊಸ ತಾಲೂಕು ರಚನೆಯನ್ನು ಈಗಿನ ಸರ್ಕಾರ ಕೈ ಬಿಡಲು ಮುಂದಾಗಿದ್ದಕ್ಕಾಗಿ ಪ್ರತಿಭಟನೆ ನಡೆಸುತ್ತೇವೆ ಎಂದರು. ಸಿದ್ದಪ್ಪ ಬಂಡಿ, ಎಚ್.ಎಸ್. ಸೊಂಪುರ, ಭಾಸ್ಕರ ರಾಯಬಾಗಿ, ಬಾಳು ಗೌಡರ ಇದ್ದರು.