ಹೊಸ ತಾಲೂಕು: ದಾರಿ ತಪ್ಪಿಸುವ ಯತ್ನ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 25
ರಾಜ್ಯದಲ್ಲಿ ಹೊಸ ತಾಲೂಕು ರಚನೆ ಕುರಿತು ರಾಜ್ಯ ಸರ್ಕಾರ ತೆಗೆದುಕೊಂಡ ನಿಲುವಿನ ಬಗೆಗೆ ಬಿಜೆಪಿ ಬೆಂಬಲಿತ ಹೋರಾಟ ಸಮಿತಿಯ ಕೆಲವರು ವಾಸ್ತವಿಕ ಅಂಶ ಮರೆಮಾಚಿ ಜನರ ದಿಕ್ಕು ತಪ್ಪಿಸುವಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ ಹೇಳಿದರು.
ಶನಿವಾರ ಸ್ಥಳೀಯ ಕಾಂಗ್ರೆಸ್ ಜನ ಸಂಪರ್ಕ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಅಂತಿಮ ಅವಧಿಯಲ್ಲಿ ಚುನಾವಣಾ ಗಿಮಿಕ್ ಆಗಿ ದಿಢೀರನೆ 43 ಹೊಸ ತಾಲೂಕು ಘೋಷಿಸಿ ಜನರ ಮೆಚ್ಚುಗೆ ಗಳಿಸುವ ವಿಫಲ ಯತ್ನ ನಡೆಸಿದರು. ಚುನಾವಣೆ ಫಲಿತಾಂಶ ಅವರ ತಂತ್ರವನ್ನು ಬುಡಮೇಲಾಗಿಸಿತು ಎಂದು ವ್ಯಂಗ್ಯವಾಡಿದರು.
ಸರ್ಕಾರ ಬದ್ಧ: ಗಜೇಂದ್ರಗಡ ಸೇರಿದಂತೆ ರಾಜ್ಯದ 43 ಹಾಗೂ ಇನ್ನಿತರ ಕೆಲ ಹೊಸ ತಾಲೂಕುಗಳ ರಚನೆಗೆ ಸರ್ಕಾರ ಬದ್ಧವಾಗಿದೆ. ಆದರೆ, ಎಲ್ಲದಕ್ಕೂ ಸಮಯ ತೆಗೆದುಕೊಳ್ಳಲಿದೆ. ಬಿಜೆಪಿ ಮುಖಂಡರು ಮಾಡಿರುವ ಆರೋಪ ಹುಟ್ಟಿದಾಕ್ಷಣ ಮಗು ಎದ್ದು ನಡೆದಾಡುತ್ತಿಲ್ಲ ಎಂಬಂತಾಗಿದೆ. ಹಿಂದಿನ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಸ್ಥಾಪಿಸಿರುವ ವಿಶೇಷ ತಹಸೀಲ್ದಾರ ಕಚೇರಿಗಳಿಗೆ ಯಾವುದೇ ಮೂಲ ಸೌಕರ್ಯ ಒದಗಿಸದೇ ಜನಸೇವೆ ನೀಡಿಲ್ಲ. ಆ ಕಾರ್ಯಾಲಯಗಳು ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ.
ಇದರಿಂದ ಸಾರ್ವಜನಿಕ ಸೇವೆ ವಿಳಂಬವಾಗುತ್ತಿದೆ. ಹೀಗಾಗಿ ತಕ್ಷಣ ಹೊಸ ತಾಲೂಕುಗಳ ಎಲ್ಲ ಇಲಾಖೆಗಳ ಕಚೇರಿ ಸೇರಿದಂತೆ ಸಿಬ್ಬಂದಿ ನೇಮಕದಲ್ಲಿ ವಿಳಂಬವಾಗುವ ಬಗೆಗೆ ಹಾಗೂ ಆರ್ಥಿಕ ನೆರವು ಕ್ರೂಢೀಕರಣ ಮೂಲಕ ಹಂತ, ಹಂತವಾಗಿ ಎಲ್ಲ ಇಲಾಖೆಗಳ ಜನಸೇವೆ ದೊರಕುವ ಬಗೆಗೆ ಸರ್ಕಾರ ವಾಸ್ತವಿಕ ಚಿತ್ರಣ ನೀಡಿದೆ. ಇದನ್ನೇ ಬಿಜೆಪಿ ನಾಯಕರು ಹಾಗೂ ಹೋರಾಟ ಸಮಿತಿ ತಮ್ಮ ರಾಜಕೀಯ ಬಂಡವಾಳವಾಗಿ ಮಾಡಿಕೊಂಡು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿರುವುದು ಜನರ ನಗೆ ಪಾಟಲಿಗೆ ಈಡಾಗಿದೆ. ಹಾಗೂ ಇದೊಂದು ಅಧಿಕಾರ ಕಳೆದುಕೊಂಡು ಹತಾಶೆ ಪ್ರತೀಕವಾಗಿದೆ ಎಂದು ದೂರಿದರು.
ಶೈಕ್ಷಣಿಕ ಕ್ರಾಂತಿ: ಮಾಜಿ ಸಚಿವ ಕಳಕಪ್ಪ ಬಂಡಿ ಗಜೇಂದ್ರಗಡ ಪಟ್ಟಣದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದೇನೆ ಎನ್ನುತ್ತಾರೆ. ಆದರೆ, ವಾಸ್ತವಿಕ ಚಿತ್ರಣ ತದ್ವಿರುದ್ಧವಾಗಿವೆ ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳು ಲಭಿಸಲಿವೆ. ಸ್ಥಳೀಯ ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು, ಉಪನ್ಯಾಸಕರ ಕೊರತೆಯಿಂದ ಗುಣ ಮಟ್ಟದ ಶಿಕ್ಷಣ ದೊರೆಯದೇ ಗ್ರಾಮೀಣ ಮಕ್ಕಳ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ. ಈ ಎಲ್ಲ ಸಮಸ್ಯೆಗಳ ನಿವಾರಣೆಗೆ ನೂತನ ಶಾಸಕ ಜಿ.ಎಸ್. ಪಾಟೀಲರು ಶ್ರಮಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಜೀತ್ ವಂದಕುದರಿ, ಸುಭಾನಸಾಬ ಆರಗಿದ್ದಿ, ಅಪ್ಪು ಮತ್ತಿಕಟ್ಟಿ, ಶ್ರೀಕಾಂತ ಅವಧೂತ, ರವಿ ಗಡೇದವರ, ಪ್ರಶಾಂತ ರಾಠೋಡ, ಶ್ರೀಧರ ಗಂಜಿಗೌಡ್ರ, ಹೂವಾಜಿ ಚಂದುಕರ್, ದತ್ತು ಬಾಕಳೆ, ಮುರ್ತುಜಾ ಡಾಲಾಯತ್, ದಾದು ಹಣಗಿ, ಮುತ್ತಪ್ಪ ಲಕ್ಕಲಕಟ್ಟಿ, ಕಳಕಪ್ಪ ಜಾಡಬಂದಿ, ಶ್ರೀಧರ ಚುಂಚಾ, ಕೊಟ್ರೇಶ ಚಿಲಕಾ, ವೆಂಕಣ್ಣ ಸೊನ್ನದ ಇದ್ದರು.