ಜನತೆಯ ಆಶೋತ್ತರಕ್ಕೆ ಸ್ಪಂದನೆ
ಗದಗ: ನಗರದ 29ನೇ ವಾರ್ಡ್ ಸೇರಿದಂತೆ ಗದಗ-ಬೆಟಗೇರಿ ಅವಳಿ ನಗರದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವುದು ತಮ್ಮ ಪ್ರಥಮ ಆದ್ಯತೆಯ ಕರ್ತವ್ಯವೆಂದು ತಾವು ತಿಳಿದಿರುವುದಾಗಿ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಎಲ್.ಡಿ.ಚಂದಾವರಿ ಹೇಳಿದರು.
ಶುಕ್ರವಾರ ನಗರದ ಕರಿಯಮ್ಮ ಕಲ್ಲು ಬಡಾವಣೆಯ ಕರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ತಮ್ಮ 54 ನೇ ಹುಟ್ಟು ಹಬ್ಬದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಗಳು, ಹಿರಿಯರು ಸರ್ವ ಸಮುದಾಯ ಸಮಾಜದ ಜನತೆ ಸೇರಿದಂತೆ ಮಾಜಿ ಶಾಸಕ ಡಿ.ಆರ್. ಪಾಟೀಲ ಅವರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ಯಾವುದೇ ಜನಪ್ರತಿನಿಧಿ ನಿರಂತರವಾಗಿ ಪ್ರಾಮಾಣಿಕ, ಜನಪರ ಕಾಳಜಿ ಹೊಂದಿ ಕೆಲಸ ಮಾಡಿದಲ್ಲಿ ಜನತೆ ಅವರನ್ನು ಕೈ ಬಿಡದೆ ಅವರ ಗೆಲುವಿಗೆ ಜಾತ್ಯತೀತವಾಗಿ ಬೆಂಬಲಿಸಿ ಗೆಲ್ಲಿಸುವರೆಂಬುದಕ್ಕೆ ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 33 ಸಾವಿರಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬಂದಿರುವ ಸಚಿವ ಎಚ್.ಕೆ. ಪಾಟೀಲರ ಗೆಲವು ನಿದರ್ಶನವಾಗಿದೆ ಎಂದರು. ರಾಜ್ಯ ಸೇರಿದಂತೆ ಗದಗ-ಬೆಟಗೇರಿ ಚುನಾವಣೆಯಲ್ಲಿ ಕೂಡ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತದ ಗೆಲವು ತಂದು ಕೊಟ್ಟಿರುವುದು ಪಕ್ಷದ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದಂತಾಗಿದೆ. ಅವಳಿ ನಗರದ ಮೂಲಭೂತ ಸೌಕರ್ಯಕ್ಕೆ ಮುಖ್ಯವಾಗಿ ನೀರಿನ ಪೂರೈಕೆಗೆ ರಾಜ್ಯದ ಗ್ರಾಮಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲರು ತ್ವರಿತ ಚಾಲನೆ ನೀಡಿರುವುದು ಜನತೆಗೆ ಸಂತಸ ತರುವ ಕ್ರಮವಾಗಿದೆ. ಅವರ ಜನಪರ ಕಾಳಜಿಯ ಇಚ್ಛಾಶಕ್ತಿ ಪ್ರಬಲವಾಗಿದ್ದು, ಪ್ರಶ್ನಾತೀತವಾಗಿದೆ ಎಂದರು.
ಈ ಸಂದರ್ಭ ಚಂದಾವರಿ ಕುಟುಂಬ ವರ್ಗದವರು ಸೇರಿದಂತೆ ನಗರಸಭೆ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ, ಹಾಜಿ ಇಸ್ಮಾಯಿಲಸಾಬ ಬೊದ್ಲೆಖಾನ, ಹಾಜಿನಜೀರಸಾಬ ಡಂಬಳ, ಹಾಜಿ ಎಂ.ಆರ್. ಅಣ್ಣಿಗೇರಿ, ಜೆ.ಕೆ. ಜಮಾದಾರ, ರಾಮಣ್ಣ ಫಲದೊಡ್ಡಿ, ರಿಯಾಜ ಅಹ್ಮದ ಡಂಬಳ, ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಎಸ್.ಎನ್. ಬಳ್ಳಾರಿ, ಇತರರು ಉಪಸ್ಥಿತರಿದ್ದರು.