ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಿರಂತರ ಪರಿಶ್ರಮಕ್ಕೆ ಪ್ರತಿಫಲ ಖಚಿತ: ಪಾಟೀಲ

Mainashree
Updated On : 27 May 2013, 11:02 am

ಕನ್ನಡಪ್ರಭ ವಾರ್ತೆ, ನರೇಗಲ್ಲ, ಮೇ 26
ಪ್ರತಿ ಮಗು ಮೂಲ ಜ್ಞಾನವಂತನಾಗಿರುವುದಿಲ್ಲ. ಅವನಲ್ಲಿರುವ ಕಲಿಯಬೇಕೆಂಬ ಉತ್ಸಾಹ, ತಲ್ಲೀನತೆ, ನಿರಂತರ ಪ್ರಯತ್ನ ಅವನನ್ನು ಜಾಣನನ್ನಾಗಿ ಮಾಡುತ್ತದೆ. ನಿರಂತರ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ಅನ್ನದಾನೇಶ್ವರ ಪಪೂ ಕಾಲೇಜಿನ ಪ್ರಾಚಾರ್ಯ ವೈ.ಸಿ. ಪಾಟೀಲ ಹೇಳಿದರು.
ಅವರು ಭಾನುವಾರ ಪಟ್ಟಣದ ದತ್ತಾತ್ರೇಯ ದೇವಸ್ಥಾನದಲ್ಲಿ ಕಿಯೋನಿಕ್ಸ್ ಫ್ರಾಂಚೈಸ್ ನರೇಗಲ್ಲ ಸೈಬರ್‌ಟೆಕ್ ಕಂಪ್ಯೂಟರ್ಸ್ ವತಿಯಿಂದ ಆಯೋಜಿಸಿದ್ದ 2012-13ನೇ ಸಾಲಿನಲ್ಲಿ ನರೇಗಲ್ಲಿನ ವಿವಿಧ ಕಾಲೇಜುಗಳ ಪಿಯುಸಿ ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ಮೊದಲ 3 ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಹಾಗೂ 13ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಇಂದಿನ ದಿನದಲ್ಲಿ ಪ್ರತಿಯೊಂದನ್ನು ಹಣದಿಂದ ಅಳೆಯುವ ಕಾಲದಲ್ಲಿ ಈ ರೀತಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಅವರನ್ನು ಸನ್ಮಾನಿಸಿ, ಅವರ ಉನ್ನತ ಶಿಕ್ಷಣದ ಬಗ್ಗೆ ತಿಳಿವಳಿಕೆ ನೀಡುತ್ತಿರುವುದನ್ನು ನೋಡಿದರೆ ಹರ್ಷವೆನಿಸುತ್ತದೆ. ಇದಕ್ಕೆ ಕಾರಣಿಕರ್ತರಾದ ಎಲ್ಲ ಕಾಲೇಜುಗಳ ಪ್ರಾಧ್ಯಾಪಕ ವೃಂದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಶಿಕ್ಷಕರು ಜ್ಞಾನದ ಬುತ್ತಿಯನ್ನು ಮಕ್ಕಳಿಗೆ ಪ್ರೀತಿ ವಿಶ್ವಾಸದಿಂದ ಹೃದಯ ಪೂರ್ವಕವಾಗಿ ತುಂಬಿ, ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿ, ಅವರು ನಿರಂತರ ಅಭ್ಯಾಸದಲ್ಲಿ ತೊಡಗುವಂತೆ ಮಾಡುವ ಅವರ ಉತ್ಸಾಹ, ನಿರಂತರ ಕ್ರಿಯಾಶೀಲತೆಯಿಂದ ಕಾರ್ಯ ಪ್ರವೃತ್ತರಾಗುವ ಅವರ ಜಾಣ್ಮೆ ಅದ್ಭುತ ಎಂದರು. ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿ, ಯಾವ ಮಗುವೂ ದಡ್ಡನಲ್ಲ ಪ್ರತಿಯೊಬ್ಬರಲ್ಲೂ ಒಂದೊಂದು ವಿಶೇಷವಾದ ಕೌಶಲ್ಯ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ತಿಳಿವಳಿಕೆ ನೀಡಿ, ಅವರನ್ನು ಒಬ್ಬ ಪ್ರಜ್ಞಾವಂತನನ್ನಾಗಿ ಮಾಡುವ ಕರ್ತವ್ಯ ಪ್ರತಿ ಶಿಕ್ಷಕರಿಗೂ ಸೇರಿದ್ದು ಎಂದರು.
ಅಧ್ಯಕ್ಷತೆ ವಹಿಸಿದ್ದ ನಂದೀಶ ಅಚ್ಚಿ ಮಾತನಾಡಿದರು. ವಿರೂಪಾಕ್ಷಪ್ಪ ಸಂಗನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಳೀಯ ಕಾಲೇಜುಗಳಾದ ಅನ್ನದಾನೇಶ್ವರ ಪಪೂ ಕಾಲೇಜು, ಕೆಎಸ್‌ಎಸ್ ಪಪೂ ಕಾಲೇಜು ಹಾಗೂ ಸರ್ಕಾರಿ ಪಪೂ ಕಾಲೇಜಿನ ಒಟ್ಟು 16 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗಣಿತ ಉಪನ್ಯಾಸಕ ವಿದ್ಯಾಸಾಗರ ಮಲಗೌಡನ್ನವರ, ಎಸ್.ಎಚ್. ಕುಲಕರ್ಣಿ, ಮುತ್ತಣ್ಣ ಕಡಗದ, ಮಲ್ಲು ದೇಶಣ್ಣವರ ಮುಂತಾದವರು ಪಾಲ್ಗೊಂಡಿದ್ದರು. ಸಾವಿತ್ರಿ ಜಾಲಣ್ಣವರ ಸ್ವಾಗತಿಸಿದರು. ಮಂಜುನಾಥ ಮಡಿವಾಳರ ನಿರೂಪಿಸಿದರು. ಪ್ರೇಮಾ ಕುಷ್ಟಗಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement