ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಂಕರರಿಂದ ಹಿಂದೂ ಧರ್ಮದ ಪುನರುಜ್ಜೀವನ

Mainashree
Updated On : 27 May 2013, 11:03 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 26
ಹಿಂದೂ ಧರ್ಮವು ಅವನತಿಯತ್ತ ಸಾಗುತ್ತಿದ್ದ ಸಂದರ್ಭದಲ್ಲಿ ಅವತರಿಸಿದ ಶಂಕರಾಚಾರ್ಯರು ಧರ್ಮದ ವೇದಾಂತ ತತ್ವಗಳನ್ನು ಪುನರುಜ್ಜೀವನಗೊಳಿಸಿದರು ಎಂದು ಶೃಂಗೇರಿ ಶಾರದಾಪೀಠದ ಧರ್ಮಾಧಿಕಾರಿ ಭೀಮಸೇನರಾವ್ ಅಳವಂಡೀಕರ ಅಭಿಪ್ರಾಯಪಟ್ಟರು.
ಅವರು ಶನಿವಾರ ಪಟ್ಟಣದ ಶಂಕರಭಾರತಿ ಮಠದಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ಸೋಮವಾರದಿಂದ ಪ್ರಾರಂಭವಾದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದ ಸಮಾರೋಪದಲ್ಲಿ ಗಣ್ಯರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಶಂಕರ ಸಂದೇಶ ಉಪನ್ಯಾಸ ನೀಡಿದರು. ಶಂಕರಾಚಾರ್ಯರು ಬಾಲಕರಾಗಿದ್ದಾಗಲೆ ಅಧ್ಯಾತ್ಮದ ಕಡೆಗೆ ಒಲವು ತೋರಿದ್ದರು. ಆದರೆ, ಅವರ ತಾಯಿಯ ಮೇಲೆ ಭಕ್ತಿ ಅಪಾರವಾಗಿತ್ತು. ಅದಕ್ಕಾಗಿ ತಾಯಿಯ ಅನೂಕೂಲಕ್ಕಾಗಿ ಪೂರ್ಣಾನದಿಯನ್ನು ಪ್ರಾರ್ಥಿಸಿ ಅದರ ದಿಕ್ಕನ್ನು ಬದಲಾಯಿಸಿದ್ದರು.
ತಾಯಿ ಬಗ್ಗೆ ಅವರಿಗಿದ್ದ ಭಕ್ತಿಯನ್ನು ಈ ಮೂಲಕ ಅವರು ವ್ಯಕ್ತಪಡಿಸಿದ್ದರು. ಚಿಕ್ಕ ವಯಸ್ಸಿನ ಶಂಕರರು ವೇದ, ಪುರಾಣಗಳಗಳನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡಿದ್ದರು. ಹಿಂದೂ ಧರ್ಮವು ಜಗತ್ತಿನಲ್ಲಿ ಶ್ರೇಷ್ಠತೆಯನ್ನು ಪಡೆದುಕೊಳ್ಳಲು ಶಂಕರಾಚಾರ್ಯರು ಕಾರಣರಾಗಿದ್ದಾರೆ ಎಂದರು. ಶಾರದಾಂಬಾ ಭಜನಾ ಮಂಡಳಿಗಳ ರಾಜ್ಯ ನಿರ್ದೇಶಕಿ ಹಾಗೂ ಕೊಪ್ಪಳ ನಗರಸಭೆ ಮಾಜಿ ಸದಸ್ಯೆ ಸುಮಾ ಜಗನ್ನಾಥಶಾಸ್ತ್ರಿ ಮಾತನಾಡಿ, ಸಮಾಜದಲ್ಲಿನ ಪ್ರತಿ ಮಹಿಳೆಯರೂ ನಮ್ಮ ಸಂಸ್ಕೃತಿಯ ರಕ್ಷಣೆಗೆ ಆದ್ಯತೆ ನೀಡಿ, ಉತ್ತಮ ಸಂಸ್ಕಾರಗಳನ್ನು ನೀಡುವ ಮೂಲಕ ಮಕ್ಕಳನ್ನು ಬೆಳೆಸಿ, ಮನಸ್ಸನ್ನು ಸನ್ಮಾರ್ಗದಲ್ಲಿ ಸಾಗುವಂತೆ ಮಾಡುವುದು ಅವಶ್ಯವಾಗಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಪಟ್ಟಣದ ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನಿಸ್ ವಹಿಸಿದ್ದರು. ಅತಿಥಿಗಳಾಗಿ ಗದಗ ಭಾರತಿತೀರ್ಥ ವೇದ ಪಾಠಶಾಲೆಯ ಸಂಚಾಲಕ ಪ್ರಭಾಕರ ದೀಕ್ಷಿತ, ಶೃಂಗೇರಿ ಅದ್ವೈತ ಶೋಧ ಕೇಂದ್ರದ ಗದಗ ಜಿಲ್ಲಾ ಪ್ರಧಾನ ಗಣೇಶಭಟ್ ಪುರಾಣಿಕ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಾಜದ ಹಿರಿಯರಾದ ವಸಂತರಾವ ಜೋಶಿ, ಕಳಸದ ಜೋಶಿ, ಬಿ.ಕೆ. ಕುಲಕರ್ಣಿ, ಲೋಹಿತ್ ಹುಲಮನಿ, ಸೋಮಣ್ಣ ಪೂಜಾರ ಮುಂತಾದವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಹಲವರನ್ನು ಸನ್ಮಾನಿಸಲಾಯಿತು. ಶಂಕರ ಸೇವಾ ಸಮಿತಿ ಅಧ್ಯಕ್ಷ ವಿ.ಎಲ್.ಪೂಜಾರ ಸ್ವಾಗತಿಸಿದರು. ಕೆ.ಎಸ್.ಕುಲಕರ್ಣಿ ವಂದಿಸಿದರು. ದಿಗಂಬರ ಪೂಜಾರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement