ಮುಂಡರಗಿ ಜನತೆಗಿಲ್ಲ ಶುದ್ಧ ಕುಡಿಯುವ ನೀರು ಭಾಗ್ಯ
- ಶರಣು ಸೊಲಗಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 27
ಗದಗ ಜಿಲ್ಲೆಯ ರೋಣ ನರಗುಂದ, ಗದಗ ಹಾಗೂ ಶಿರಹಟ್ಟಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಜಿಲ್ಲಾ ಪಂಚಾಯಿತಿ ಎಂಜನಿಯರಿಂಗ್ ಇಲಾಖೆ ವತಿಯಿಂದ ಅಲ್ಲಿನ ಸಾರ್ವಜನಿಕರಿಗೆ ಕುಡಿಯಲು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದ್ದು, 30 ಸಾವಿರ ಜನಸಂಖ್ಯೆ ಹೊಂದಿರುವ ಮುಂಡರಗಿ ಪಟ್ಟಣದಲ್ಲಿ ಮಾತ್ರ ಇದುವರೆಗೂ ಒಂದೇ ಒಂದು ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭವಾಗದೇ ಇರುವುದು ಇಲ್ಲಿನ ಜನತೆಗೆ ಅಸಮಾಧಾನಕ್ಕೆ ಕಾರಣವಾಗಿದೆ.
ತುಂಗಭದ್ರಾ ನದಿಯಲ್ಲಿ ನೀರು ಖಾಲಿಯಾದಾಗಿನಿಂದಲೂ ಪುರಸಭೆ ವ್ಯಾಪ್ತಿಯ ಶಿರೋಳ, ರಾಮೇನಹಳ್ಳಿ, ಬ್ಯಾಲವಾಡಗಿ ಹಾಗೂ ಮುಂಡರಗಿ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿಲ್ಲ. ಪಟ್ಟಣದಾದ್ಯಂತ ನಾಲ್ಕೈದು ಜನರು ಖಾಸಗಿಯಾಗಿ ಮಾತ್ರ ಪ್ರಾರಂಭಿಸಿದ್ದು, ಅವರು 20 ಲೀಟರ್ ಶುದ್ಧ ನೀರಿಗೆ ರು. 20-30 ರವರೆಗೆ ಹಣ ಪಡೆದುಕೊಂಡು ನೀರನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಬಡ ಜನತೆ, ಸ್ಥಳೀಯರು ಪುರಸಭೆಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಗಿಡ ಕಡಿಸಿದ ಪುರಸಭೆ: ಈ ಹಿಂದೆ ಅಧಿಕಾರದಲ್ಲಿದ್ದ ಪುರಸಭೆ ಆಡಳಿತ ಮಂಡಳಿಯು ಆಡಳಿತಕ್ಕೆ ಬಂದಾಗಿನಿಂದ ಅಧಿಕಾರ ಮುಗಿಯುವವರೆಗೂ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲು ಪ್ರತಿ ಸಾಮಾನ್ಯ ಸಭೆಯಲ್ಲಿಯೂ ತೀರ್ಮಾನಿಸುತ್ತಿದ್ದರು. ಅದಕ್ಕಾಗಿ ಪುರಸಭೆ ಪಕ್ಕದ ಉದ್ಯಾನ ವನದಲ್ಲಿರುವ ದೊಡ್ಡದೊಂದು ಮರವನ್ನೂ ಕಡಿಸಿದರು. ಆದರೆ, ಅವರ ಅಧಿಕಾರ ಮುಗಿದು ಮತ್ತೆ ಹೊಸ ಆಡಳಿತ ಮಂಡಳಿ ಬಂದರೂ ಪುರಸಭೆಯಿಂದ ಶುದ್ಧ ಕುಡಿವ ನೀರು ಘಟಕ ಮಾತ್ರ ಪ್ರಾರಂಭವಾಗಿಲ್ಲ ಎನ್ನುವುದು ಇಲ್ಲಿನ ಜನರ ಆರೋಪ.
ರು. 2ಕ್ಕೆ 20 ಲೀಟರ್ ನೀರು: ಕೆ.ಎಚ್. ಪಾಟೀಲ ಪ್ರತಿಷ್ಠಾನದಿಂದ ಗದಗ ನಗರ ಸೇರಿದಂತೆ ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿದ್ದು, ಅಲ್ಲಿ 10 ಪೈಸೆಗೆ ಒಂದು ಲೀಟರ್ ನೀರು, 20 ಲೀಟರ್ಗೆ ಕೇವಲ ರು. 2 ನಿಗದಿಮಾಡಲಾಗಿದೆ. ರು. 2ರ ನಾಣ್ಯ ಹಾಕಿ 20 ಲೀಟರ್ ನೀರನ್ನು ಪಡೆಯುವ ವ್ಯವಸ್ಥೆ ಮಾಡಿದೆ. ಮುಂಡರಗಿ ಪಟ್ಟಣದಲ್ಲಿಯೂ ಅಂತಹ ಘಟಕಗಳನ್ನು ಪ್ರಾರಂಭಿಸಿ, ಪುರಸಭೆ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಹಾಗೂ ಅನ್ಯಾಯ ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕ ರಾಮಣ್ಣ ಲಮಾಣಿ ಹಾಗೂ ರೋಣ ಕ್ಷೇತ್ರದ ಮಾಜಿ ಶಾಸಕ ಕಳಕಪ್ಪ ಬಂಡಿ ಇಬ್ಬರೂ ತಮ್ಮ 5 ವರ್ಷದ ಅಧಿಕಾರಾವಧಿಯಲ್ಲಿ ಮುಂಡರಗಿ ಹಾಗೂ ಡಂಬಳ ಹೋಬಳಿಗೆ ಜಿಪಂ ಎಂಜಿನಿಯರ್ ಇಲಾಖೆ ವತಿಯಿಂದ ಒಟ್ಟು 11 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿದ್ದು, ಇದೀಗ ಕೊರ್ಲಹಳ್ಳಿ, ಕಲಕೇರಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಸ್ಥಗಿತಗೊಂಡಿದ್ದು, ದುರಸ್ತಿಗಾಗಿ ಗ್ರಾಪಂಗೆ ಕೇಳಿದರೆ ಅವರು ಬೇರೆಯವರತ್ತ ಕೈ ತೋರಿಸುತ್ತಿದ್ದಾರೆ.