ಶಾಲಾ ಪ್ರಾರಂಭೋತ್ಸವ, ಮಿಂಚಿನ ಸಂಚಾರ
ಗದಗ: ಜಿಲ್ಲೆಯ 2013-14ನೇ ಸಾಲಿನ ಶೈಕ್ಷಣಿಕ ವರ್ಷವು ಮೇ 30ರಂದು ಪ್ರಾರಂಭಗೊಳ್ಳಲಿದ್ದು, ಅಂದು ಶಾಲಾ ಪ್ರಾರಂಭೋತ್ಸವ ಸಿದ್ಧತೆ, ಮೈದಾನ, ಶಾಲಾ ಕೊಠಡಿ, ಕುಡಿಯುವ ನೀರು, ಶೌಚಾಲಯಗಳು ಸುಸ್ಥಿತಿಯಲ್ಲಿರುವಂತೆ ವ್ಯವಸ್ಥೆಗೊಳಿಸಲಾಗುತ್ತದೆ. ಮೇ 31ರಂದು ಎಲ್ಲ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವವನ್ನು ನಡೆಸಲಾಗುತ್ತದೆ. ಎಸ್ಡಿಎಂಸಿ ಸದಸ್ಯರು, ಸ್ಥಳೀಯ ಗಣ್ಯರು, ಜನಪ್ರತಿನಿಧಿಗಳು, ಸಾರ್ವಜನಿಕರು, ಪೋಷಕರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಏರ್ಪಾಡಾಗಿದ್ದು, ವಿದ್ಯಾರ್ಥಿಗಳೆಲ್ಲ ಪ್ರಾರಂಭದ ದಿನದಂದೇ ಹಾಜರಾಗುವಂತೆ ಪ್ರೋತ್ಸಾಹಿಸಲಾಗುತ್ತದೆ. ಅಂದು ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಮೂಲಕ ಶಾಲೆಗಳಲ್ಲಿ ಹಬ್ಬದ ವಾತಾವರಣದೊಂದಿಗೆ ಪ್ರಾರಂಭೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.
ಮಿಂಚಿನ ಸಂಚಾರ: ಮೇ 30ರಿಂದ ಜೂನ್ 8ರ ವರೆಗೆ ಜಿಲ್ಲೆಯಲ್ಲಿ ಮಿಂಚಿನ ಸಂಚಾರ ನಡೆಯಲಿದ್ದು, ಎಲ್ಲ ಶಾಲೆಗಳು ತೆರೆಯಲ್ಪಟ್ಟಿವೆಯೇ? ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿವೆಯೇ? ಕುಡಿವ ನೀರು, ಶೌಚಾಲಯ, ಶಾಲಾ ಆವರಣ, ಶಾಲಾ ಕೊಠಡಿಗಳು, ಮಧ್ಯಾಹ್ನದ ಉಪಾಹಾರ ವ್ಯವಸ್ಥೆ, ಪಠ್ಯಪುಸ್ತಕ, ನೋಟ್ಬುಕ್, ಸಮವಸ್ತ್ರಗಳು ಹಂಚಿಕೆಯಾದ ಬಗ್ಗೆ, ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ, ಸೇತುಬಂಧ ಕಾರ್ಯಕ್ರಮ ಇತ್ಯಾದಿ ಎಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಮಿಂಚಿನ ಸಂಚಾರ ಭೇಟಿಯ ಮೂಲಕ ಸಂದರ್ಶಿಸಿ, ಖಚಿತಪಡಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಉಪನಿರ್ದೇಶಕರು (ಆಡಳಿತ) ಮತ್ತು ಉಪನಿರ್ದೇಶಕರು (ಅಭಿವೃದ್ಧಿ) ಕಚೇರಿಗಳ ಎಲ್ಲ ಅಧಿಕಾರಿಗಳು ಶಾಲೆಗಳನ್ನು ಸಂದರ್ಶಿಸಲಿದ್ದಾರೆ. ಅದೇ ರೀತಿಯ ಬ್ಲಾಕ್ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಅವರ ಕಚೇರಿ ಮೇಲ್ವಿಚಾರಕರು ಮತ್ತು ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಮಿಂಚಿನ ಸಂಚಾರ ಕೈಗೊಳ್ಳಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಸ್ಪೀಟ್ ಆಡುತ್ತಿದ್ದ ಮೂವರ ಬಂಧನ
ಗದಗ: ನಗರದ ಸಿ.ಡಿ.ಓ. ಜೈನ್ ಸ್ಕೂಲ್ ಕಾಂಪೌಂಡ್ ಗೋಡೆಯ ಹತ್ತಿರ ಇಸ್ಪೀಟ್ ಜೂಜಾಟ ಆಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ನಿವಾಸಿಗಳಾದ ನಿಂಗಪ್ಪ ಮುಗಳಿ, ಚಂದ್ರಶೇಖರಪ್ಪ ಮುದೇನಗುಡಿ ಹಾಗೂ ಮಹಾದೇವಪ್ಪ ಮುದೇನಗುಡಿ ಬಂಧಿತರು. ಬಂಧಿತರಿಂದ ರು. 5,350 ವಶಪಡಿಸಿಕೊಂಡಿದ್ದು, ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.