ಸಾಯಿರಾಮ ಮೂರ್ತಿ ಮೆರವಣಿಗೆ
ಗಜೇಂದ್ರಗಡ: ಸ್ಥಳೀಯ ಕುಷ್ಟಗಿ ರಸ್ತೆಯ ಬಳಿ ನಿರ್ಮಿಸಿರುವ ಶಿರಡಿ ಸಾಯಿರಾಮ ದೇಗುಲದಲ್ಲಿ 3 ದಿನಗಳ ಕಾಲ ನಡೆಯುವ ಸಾಯಿರಾಮ ಮೂರ್ತಿ ಜತೆ ಈಶ್ವರ, ಸಾಯಿ ಗಣಪತಿ, ಸಾಯಿ ದತ್ತಾತ್ರೇಯ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆಗೆ ಸೋಮವಾರ ಚಾಲನೆ ದೊರೆತಿದ್ದು, ಸಾಯಿರಾಮ ಮೂರ್ತಿ ಮೆರವಣಿಗೆ ನೆರವೇರಿತು. ಸಾಯಿರಾಮ ಮೂರ್ತಿಯ ಮೆರವಣಿಗೆಯು ಡೊಳ್ಳು, ಜಾಂಜ್ಮೇಳ ಜತೆ ನಾನಾ ಸಂಗೀತ ವಾದ್ಯ ವೈಭವದಿಂದ ಸಾಯಿರಾಮ ಮಂದಿರದಿಂದ ಪ್ರಾರಂಭವಾಗಿ ಪಟ್ಟಣದ ಜನತಾ ಪ್ಲಾಟ್, ಜೋಡುರಸ್ತೆ, ಹಿರೇಬಜಾರ, ಕೊಳ್ಳಿಯವರ ಕ್ರಾಸ್, ಕಂಬಾರಗಲ್ಲಿ ಸಂಚರಿಸಿ ಮರಳಿ ಸ್ವ ಸ್ಥಳಕ್ಕೆ ತಲುಪಿತು. ರವಿಶಾಸ್ತ್ರೀ ಜೀರೆ, ಮಂಜು ಮ್ಯಾಕಲ್, ಆನಂದ ಮಂತ್ರಿ, ಸಂತೋಷ ಮಂತ್ರಿ, ಬಾಳು ಪವಾರ, ಉಮೇಶ ಮೆಣಸಗಿ ಮೆರವಣಿಗೆ ನೇತೃತ್ವ ವಹಿಸಿದ್ದರು. ಬೆಳಗ್ಗೆ ಸಾಯಿರಾಮ ಟ್ರಸ್ಟ್ ವತಿಯಿಂದ ಸೂಡಿ ಗಜಾನನ ಸಂಸ್ಕೃತ ಪಾಠ ಶಾಲೆಯ ಪ್ರಾಂಶುಪಾಲ ಜಿ.ಆರ್. ಜೋಶಿ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ಮೇ 28 ರಂದು ಧಾರ್ಮಿಕ ಕಾರ್ಯಕ್ರಮ ಜರುಗಲಿದ್ದು, ಬೆಳಗ್ಗೆ 6ಕ್ಕೆ ಧ್ವಜಾರೋಹಣ, ಗಂಗಾಪೂಜೆ, ಗೋಪೂಜೆ, ಪುಣ್ಯಾಹವಾಚನ, ಋತ್ವಿಗವರುಣ, ಮಧುಪರ್ಕ ಪೂಜಾ, ಪ್ರತಿಷ್ಠಾಪನಾ ಮೂರ್ತಿಗಳ ಅವಾಹನ ಪೂಜಾ, ಜಲಧಿವಾಸ, ಧಾನ್ಯಾಧಿವಾಸ, ಕ್ಷಿರಾಧಿವಾಸ, ವಸ್ತ್ರಾಧಿವಾಸ, ಶಯ್ಯಾಧಿವಾಸ, ಮತ್ತು ನವಗ್ರಹಾಧಿ ಜಪ, ಮಧ್ಯಾಹ್ನ ಸ್ಥಾಪಿತ ದೇವತಾ ಮಹಾಮಂಗಳಾರತಿ, ಮಹಾನೈವಿದ್ಯ, ಸಂಜೆ ಉದಕ ಶಾಂತಿ ಹಾಗೂ ಸಂಗೀತ ಸೇವೆ ನಡೆಯಲಿದೆ.