ಬೀಜ ಖರೀದಿಗೆ ನೂಕುನುಗ್ಗಲು
ಗಜೇಂದ್ರಗಡ: ಕಳೆದ ಎರಡು ವರ್ಷದಿಂದ ಬರಗಾಲದಿಂದ ತತ್ತರಿಸಿರುವ ರೈತರು ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದು, ಗಜೇಂದ್ರಗಡ ಸುತ್ತಮುತ್ತಲ ಪ್ರದೇಶದಲ್ಲಿನ ರೈತರು ಸ್ಥಳೀಯ ಎಪಿಎಂಸಿ ಆವರಣದ ಗೋದಾಮಿನಲ್ಲಿ ಕೃಷಿ ಇಲಾಖೆ ಪ್ರಾರಂಭಿಸಿರುವ ತಾತ್ಕಾಲಿಕ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ರಿಯಾಯಿತಿ ದರದ ಬಿತ್ತನೆ ಬೀಜಗಳನ್ನು ರೈತರು ಪಡೆದುಕೊಳ್ಳುಲು ಮುಂದಾದಾಗ ನೂಕುನುಗ್ಗುಲು ಉಂಟಾಯಿತು.
ಪ್ರಸಕ್ತ ಸಾಲಿನಲ್ಲಿ ವರುಣ ದೇವರಿಗೆ ಮೊರೆ ಹೋಗಿರುವ ರೈತರು ಮುಂಗಾರಿನ ಉತ್ತಮ ಮಳೆ ಆಶಾಭಾವನೆ ಹೊಂದಿದ್ದಾರೆ. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಸಣ್ಣ ಮತ್ತು ಅತಿ ಸಣ್ಣ ರೈತರು ಸರ್ಕಾರದ ಸಹಾಯ ಧನದಲ್ಲಿ ಕೃಷಿ ಇಲಾಖೆ ಬೀಜ ವಿತರಣಾ ಕೇಂದ್ರದಲ್ಲಿನ ಬೀಜಗಳನ್ನು ಪಡೆದುಕೊಳ್ಳಲು ರೈತರು ದಿಢೀರನೆ ಮುಗಿಬಿದ್ದಿದ್ದರು. ಇದರಿಂದ ತಬ್ಬಿಬ್ಬಾದ ಇಲಾಖೆ ನೌಕರರು ಬೀಜಗಳನ್ನು ವಿತರಿಸಲು ಸಹಕಾರ ನೀಡಬೇಕೆಂದು ರೈತರಲ್ಲಿ ಮನವಿ ಮಾಡಿದರು. ಕೇಂದ್ರದಲ್ಲಿ ಹೆಸರು, ತೊಗರಿ, ಸೂರ್ಯಕಾಂತಿ, ಸಜ್ಜೆ, ಗೋವಿನಜೋಳ, ಹೈಬ್ರಿಡ್ ಜೋಳ ಪಡೆಯಲು ಹಣ ಪಾವತಿಸುವ ಒಂದೇ ವ್ಯವಸ್ಥೆ ಕಲ್ಪಿಸಿದ್ದರಿಂದ ರೈತರು ರಿಯಾಯತಿ ದರದ ಹಣ ತುಂಬಲು ತಾಸಿಗೂ ಹೆಚ್ಚು ಕಾಲ ಸರದಿಯಲ್ಲಿ ನಿಂತು ಸಿಬ್ಬಂದಿಗೆ ಸಹಕಾರ ನೀಡಿದರು.
ಸ್ವ-ಗ್ರಾಮದತ್ತ ರೈತರು: ಬರಗಾಲದ ಬವಣೆಗೆ ತುತ್ತಾಗಿ ಉದ್ಯೋಗಕ್ಕಾಗಿ ಇಲ್ಲಿನ ಕೆಲ ಬಡ ರೈತರು ಗೋವಾ, ಕಾರವಾರ ಇತರೆಡೆ ಉದ್ಯೋಗ ಅರಸಿ ಗುಳೆ ಹೋದವರೆಲ್ಲರೂ ಸ್ವ-ಗ್ರಾಮದತ್ತ ಮರಳುತ್ತಿದ್ದು, ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಗಜೇಂದ್ರಗಡ, ಗೌಡಗೇರಿ, ಕುಂಟೋಜಿ, ಮ್ಯಾಕಲ್‌ಝರಿ, ಗೋಗೇರಿ, ಮಾಟರಂಗಿ, ರಾಮಾಪುರ, ಪುರ್ತಗೇರಿ, ಕೊಡಗಾನೂರ, ವೀರಾಪುರ, ಚಿಲ್‌ಝರಿ, ಕಾಲಕಾಲೇಶ್ವರ, ಬೈರಾಪುರ, ಜಿಗೇರಿ, ರಾಜೂರ, ದಿಂಡೂರ, ಲಕ್ಕಲಕಟ್ಟಿ, ಕಲ್ಲಿಗನೂರ, ಮುಶಿಗೇರಿ, ಗ್ರಾಮಗಳಲ್ಲಿ ರೈತರು ಬಿತ್ತನೆಯಲ್ಲಿ ನಿರತರಾಗಿದ್ದಾರೆ. ಆದರೆ, ನಿಡಗುಂದಿ, ಸೂಡಿ, ಇನ್ನಿತರ ಗ್ರಾಮಗಳ ಕಪ್ಪುಮಿಶ್ರಿತ ಎರೆ ಭೂಮಿಯಲ್ಲಿ ಹೆಸರು ಕಾಳು ಬಿತ್ತನೆ ಕಾರ್ಯಕ್ಕೆ ಮಳೆಗಾಗಿ ಕಾಯುತ್ತಿದ್ದಾರೆ.