ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಸಾಪ ನಿರ್ಧಾರಕ್ಕೆ ವಿರೋಧ

Lingaraj Badiger
Updated On : 30 May 2013, 11:32 am

ಗದಗ:  ಗದಗ ಜಿಲ್ಲಾ ಕಸಾಪ ಅನುದಾನದ ನೆಪ ಒಡ್ಡಿ ಒಂದೇ ತಿಂಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಸಮ್ಮೇಳನವನ್ನು ಮಾಡಿ ಮುಗಿಸಲು ಹೊರಟಿರುವ ಕ್ರಮಕ್ಕೆ ಚುಟುಕ ಸಾಹಿತಿ ಡಿ.ವಿ. ಬಡಿಗೇರ ತೀವ್ರವಾಗಿ ವಿರೋಧಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಸಾಹಿತಿಗಳು ಹಾಗೂ ಗಣ್ಯರ ಪೂರ್ವಭಾವಿ ಸಭೆ ಕರೆದು ಈ ಬಗ್ಗೆ ಚರ್ಚಿಸುವ ಸೌಜನ್ಯ ಕೂಡ ಮಾಡದೇ ಕಸಾಪ ಪದಾಧಿಕಾರಿಗಳು ತಮ್ಮ ಮನಬಂದಂತೆ ವರ್ತಿಸುತ್ತಿರುವುದು ಖಂಡನೀಯ ಹಾಗೂ ಹಲವಾರು ಸಂಶಯಗಳಿಗೆ ಆಸ್ಪದ ನೀಡಿದೆ. ಯಾವುದೇ ಸಮ್ಮೇಳನ ಯಶಸ್ವಿಯಾಗಿ ಮತ್ತು ಅಚ್ಚುಕಟ್ಟಾಗಿ ನಡೆಯಲು ಪೂರ್ವಭಾವಿ ತಯಾರಿ ಅತಿ ಅವಶ್ಯ. ಕನಿಷ್ಠ 3 ತಿಂಗಳ ಅವಧಿಯಾದರೂ ಬೇಕು. ಆದರೆ, ಜಿಲ್ಲಾ ಕಸಾಪ ಗದಗ ಜಿಲ್ಲೆಯಲ್ಲಿ 2 ಸಮ್ಮೇಳನಗಳನ್ನು ಒಂದೇ ತಿಂಗಳಲ್ಲಿ ಕೇವಲ 5 ದಿನಗಳ ಅಂತರದಲ್ಲಿ ಮಾಡಹೊರಟಿರುವುದು ಕಾಟಾಚಾರದ ಕ್ರಮವಾಗಿದೆ ಎಂದು ಟೀಕಿಸಿದರು. ಸರ್ಕಾರವು ಜಿಲ್ಲಾ ಸಮ್ಮೇಳನಕ್ಕೆ ರು. 4 ಲಕ್ಷ ಹಾಗೂ ತಾಲೂಕು ಸಮ್ಮೇಳನಕ್ಕೆ ರು. 1ಲಕ್ಷ ಅನುದಾನವನ್ನು ನೀಡುತ್ತಿದೆ. ಈ ಅನುದಾನದ ಪ್ರಸ್ತುತ ವರ್ಷದ ಅವಧಿ ಜೂನ್ 15ಕ್ಕೆ ಮುಕ್ತಾಯವಾಗುವುದೆಂಬ ಒಂದೇ ಕಾರಣಕ್ಕೆ ಅವಸರದಲ್ಲಿ ಈ ಸಮ್ಮೇಳನ ಹಮ್ಮಿಕೊಂಡಿರುವುದು ಸೂಕ್ತವಲ್ಲ. ಕಾರಣ ಕಸಾಪ ತನ್ನ ಆತುರದ ನಿರ್ಧಾರ ಹಿಂಪಡೆಯಲು ಹಾಗೂ ಸಾಕಷ್ಟು ಪೂರ್ವ ತಯಾರಿಯೊಂದಿಗೆ ಅರ್ಥಪೂರ್ಣ ಸಮ್ಮೇಳನ ನಡೆಸಲು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement